ಮತಗಟ್ಟೆ ಅಧಿಕಾರಿ, ಸಿಬ್ಬಂದಿಗೆ ಅಂತಿಮ ಹಂತದ ತರಬೇತಿ


ಸಂಜೆವಾಣಿ ವಾರ್ತೆ
ಹೊಸಪೇಟೆ ಮೇ2: ಬಳ್ಳಾರಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೇ 7ರಂದು ಮತದಾನ ನಡೆಯಲಿದ್ದು, ಮತಗಟ್ಟೆ ಕೇಂದ್ರಗಳಿಗೆ ನಿಯೋಜನೆಯಾದ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮೇ 01ರಂದು ತರಬೇತಿ ನಡೆಯಿತು.
ಹೊಸಪೇಟೆಯ ಸಂಡೂರ ರಸ್ತೆಯಲ್ಲಿರುವ ಎಲ್‍ಎಫ್‍ಎಸ್ ಶಾಲೆಯಲ್ಲಿ ನಡೆದ ತರಬೇತಿಯಲ್ಲಿ ವಿಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆಗಳಿಗೆ ನಿಯೋಜನೆಗೊಂಡ 304 ಪಿಆರ್‍ಓ, 304 ಎಪಿಆರ್‍ಓ, 304 ಎರಡನೇ ಪೊಲೀಂಗ್ ಆಫೀಸರ್, 304 ಮೂರನೇ ಪೋಲಿಂಗ್ ಆಫೀಸರ್ ಸೇರಿ ಒಟ್ಟು 1216 ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನೀಡಲಾಯಿತು. ತರಬೇತಿಯಲ್ಲಿ 21 ಸೆಕ್ಟರ್ ಅಧಿಕಾರಿಗಳು ಹಾಗೂ 8 ಜನ ಚುನಾವಣಾ ತರಬೇತುದಾರರು ಭಾಗಿಯಾಗಿದ್ದರು.
ಮತದಾನ ದಿನದಂದು ಮತ್ತು ಮತದಾನ ದಿನದ ಹಿಂದಿನ ದಿನದಂದು ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿ ನಿರ್ವಹಿಸಬೇಕಾದ ಕಾರ್ಯ ಚಟುವಟಿಕೆಗಳ ಬಗ್ಗೆ ಚುನಾವಣಾ ಮಾಸ್ಟರ್ ಟ್ರೇನರ್ ಅವರು ತರಬೇತಿ ನೀಡಿದರು.
ಮತಗಟ್ಟೆ ಅಧಿಕಾರಿಗಳು ತಮ್ಮ ತಂಡದ ಸದಸ್ಯರನ್ನು ಒಗ್ಗೂಡಿಸಿಕೊಳ್ಳಬೇಕು. ಮತದಾನ ದಿನದ ಹಿಂದಿನ ದಿನ ಮಸ್ಟರಿಂಗ್ ಕೌಂಟರನಲ್ಲಿ ಸಾಮಗ್ರಿಗಳನ್ನು ಸರಿಯಾಗಿ ಪಡೆದುಕೊಳ್ಳಬೇಕು. ನೀಡಲಾಗುವ ಸಿಯು, ಬಿಯು, ವಿವಿಪ್ಯಾಟ್‍ಗಳು ಮತಗಟ್ಟೆಗೆ ಸೇರಿದ್ದ ಬಗ್ಗೆ ಮತಯಂತ್ರಗಳ ಐಡಿಗಳನ್ನು ಪರಿಶೀಲಿಸಿ ಖಾತ್ರಿಪಡಿಸಿಕೊಳ್ಳಬೇಕು. ಮತಯಂತ್ರಗಳನ್ನು ಮತದಾನ ದಿನಂದು ಬೆಳಗ್ಗೆ 5.30 ಗಂಟೆಗೆ ಮುನ್ನ ಜೋಡಣೆ ಮಾಡಿ ಅಣುಕು ಮತದಾನ ಪ್ರಾರಂಭಿಸುವ ಪ್ರಕ್ರಿಯೆಗಳನ್ನು ನಿಯಮಾನುಸಾರ ಮಾಡಬೇಕು ಎಂದು ನಾನಾ ವಿಷಯಗಳ ಬಗ್ಗೆ ಚುನಾವಣಾ ತರಬೇತುದಾರರು ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತಿಳಿಸಿದರು.
ಲೋಕಸಭಾ ಚುನಾವಣೆಯ ಸಾಮಾನ್ಯ ವೀಕ್ಷಕರಾದ ಚಂದ್ರಶೇಖರ ಸಖಮುರಿ, ಪೊಲೀಸ್ ವೀಕ್ಷಕರಾದ ಧರ್ಮೆಂದ್ರ ಸಿಂಗ್ ಭದೌರಿಯಾ, ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ, ಅಪರ ಜಿಲ್ಲಾಧಿಕಾರಿ ಅನುರಾಧ ಜಿ ಅವರ ತರಬೇತಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು.