ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ

ಬಾದಾಮಿ,ಏ12: ಬರುವ ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023ರ ಚುನಾವಣಾ ಕಾರ್ಯದ ಯಶಸ್ವಿಗೆ ಎಲ್ಲ ಮತಗಟ್ಟೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಬಾದಾಮಿ ಮತಕ್ಷೇತ್ರದ ಚುನಾವಣಾಧಿಕಾರಿ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಹೇಳಿದರು.
ಅವರು ಪಟ್ಟಣದ ಶ್ರೀ ವೀರಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ತರಬೇತಿಯನ್ನು ಉದ್ದೇಶಿಸಿ ಮಾತನಾಡಿದರು. ತಾವೆಲ್ಲರೂ ಅನೇಕ ಚುನಾವಣಾ ಕಾರ್ಯಗಳಲ್ಲಿ ಭಾಗಿಯಾಗಿದ್ದು, ಪ್ರಸ್ತುತ ಚುನಾವಣೆಯಲ್ಲಿ ಚುನಾವಣಾ ಆಯೋಗವು ಮಾರ್ಪಡಿಸಿದ ಕೆಲವು ಅಂಶಗಳನ್ನು ಗಮನಿಸಿ ಚುನಾವಣಾ ಕಾರ್ಯದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಎದುರಾಗದಂತೆ ಕಾರ್ಯನಿರ್ವಹಿಸಿ ಯಶಸ್ಸುಗೊಳಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ, ತಹಶೀಲದಾರ ಜೆ.ಬಿ.ಮಜ್ಜಗಿ, ತಾ.ಪಂ.ಇಒ ಮಲ್ಲಿಕಾರ್ಜುನ ಕಲಾದಗಿ, ಬಿಇಒ ಆರೀಫ್ ಬಿರಾದಾರ, ಕೃಷಿ ಸಹಾಯಕ ನಿರ್ದೇಶಕ ಅಶೋಕ ತಿರಕನ್ನವರ ಭಾಗವಹಿಸಿ ತರಬೇತಿ ನೀಡಿದರು. ತರಬೇತಿಯಲ್ಲಿ ತಾಲೂಕಿನ 899 ಜನ ಮತಗಟ್ಟೆ ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳು ಭಾಗವಹಿಸಿ ತರಬೇತಿ ಪಡೆದರು.