ಮತಗಟ್ಟೆ ಅಧಿಕಾರಿಗಳಿಗೆ ಕೊರೊನಾ ಕಿಟ್ ಸರಬರಾಜು

ಉಡುಪಿ, ಡಿ.೧೬- ಜಿಲ್ಲೆಯಲ್ಲಿ ಡಿಸೆಂಬರ್ ೨೨ ಮತ್ತು ೨೭ ರಂದು ನಡೆಯುವ ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಯು ಜಿಲ್ಲೆಯ ಒಟ್ಟು ೧೫೩ ಗ್ರಾಮ ಪಂಚಾಯತ್ ಗಳಲ್ಲಿ ನಡೆಯಲಿದ್ದು, ಕೊರೊನಾ ಹಿನ್ನೆಲೆಯಲ್ಲಿ ಈ ಎಲ್ಲಾ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಕೊರೊನಾ ಸುರಕ್ಷಿತ ಕಿಟ್‌ಗಳನ್ನು ರಾಜ್ಯ ಚುನಾವಣಾ ಆಯೋಗ ಸರಬರಾಜು ಮಾಡಿದೆ.
ಎಂ.ಎಸ್.ಐ.ಲ್ ನಿಂದ ಸರಬರಾಜು ಮಾಡಿರುವ ಈ ಕಿಟ್‌ಗಳಲ್ಲಿ, ೫೦೦ ಎಂಲ್‌ನ ೪ ಸ್ಯಾನಿಟೈಸ್ ಬಾಟೆಲ್, ೧೦೦ ಎಂಎಲ್‌ನ ೬ ಸ್ಯಾನಿಟೈಸ್ ಬಾಟೆಲ್, ಟ್ರಿಪಲ್ ಲೇಯರ್ ಸರ್ಜಿಕಲ್ ಮಾಸ್ಕ್ ೨೦, ಫೇಸ್ ಶೀಲ್ಡ್-೬ ಮತ್ತು ೬ ಜೊತೆ ಹ್ಯಾಂಡ್ ಗ್ಲೌಸ್ ಗಳು ಹಾಗೂ ೧ ಬಯೋ ಮೆಡಿಕಲ್ ಡಿಸ್ಪೋಸಲ್ ಬ್ಯಾಗ್‌ಗಳನ್ನು ಈ ಕಿಟ್ ಒಳಗೊಂಡಿದೆ.
ಜಿಲ್ಲೆಗೆ ಒಟ್ಟು ೧೨೬೦ ಕಿಟ್‌ಗಳು ಹಾಗೂ ೬೨೦ ಥರ್ಮಲ್ ಸ್ಕ್ಯಾನರ್‌ಗಳು ಸರಬರಾಜು ಆಗಿದ್ದು, ಒಟ್ಟು ೫೦೪೦ ಚುನಾವಣಾ ಸಿಬ್ಬಂದಿಗೆ ಈ ಕಿಟ್‌ಗಳ ಪ್ರಯೋಜನ ದೊರೆಯಲಿದೆ. ಪ್ರತೀ ಮತಗಟ್ಟೆಗೆ ೪ ಚುನಾವಣಾ ಸಿಬ್ಬಂದಿ ಇರಲಿದ್ದು, ಪ್ರತೀ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ಮತದಾರರು ಸಾಮಾಜಿಕ ಅಂತರ ಕಾಯ್ದುಕೊಂಡು ಮತ ಚಲಾಯಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಥರ್ಮಲ್ ಸ್ಕ್ಯಾನರ್ ಮೂಲಕ ಮತದಾರರನ್ನು ಪರೀಕ್ಷಿಸಲು ಅಂಗನವಾಡಿ ಕಾರ್ಯಕರ್ತೆಯರನ್ನು ನೇಮಿಸಲಾಗಿದೆ. ಡಿಸೆಂಬರ್ ೨೨ ರಂದು ನಡೆಯುವ ಮೊದಲ ಹಂತದ ಚುನಾವಣೆಗಾಗಿ, ಉಡುಪಿ ತಾಲೂಕಿಗೆ ೧೭೧, ಬೈಂದೂರಿಗೆ ೧೩೮, ಬ್ರಹ್ಮಾವರಕ್ಕೆ ೨೧೯ ಮತ್ತು ಹೆಬ್ರಿ ತಾಲೂಕಿಗೆ ೭೨ ಕಿಟ್‌ಗಳನ್ನು ಹಾಗೂ ಡಿಸೆಂಬರ್ ೨೭ ರಂದು ನಡೆಯುವ ಎರಡನೇ ಹಂತದ ಚುನಾವಣೆಗಾಗಿ ಕುಂದಾಪುರ ತಾಲೂಕಿಗೆ ೨೮೭, ಕಾರ್ಕಳ ೨೦೫ ಮತ್ತು ಕಾಪು ತಾಲೂಕಿಗೆ ೧೫೧ ಕಿಟ್‌ಗಳನ್ನು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ, ಮೊದಲ ಹಂತದಲ್ಲಿ ಬಳಸಿದ ಥರ್ಮಲ್ ಸ್ಕ್ಯಾನರ್‌ಗಳನ್ನು ಎರಡನೇ ಹಂತದ ಚುನಾವಣೆ ನಡೆಯುವ ಮತಗಟ್ಟೆಗಳಲ್ಲಿ ಬಳಸಿಕೊಳ್ಳಲಾಗುವುದು. ಪ್ರತೀ ಮತದಾರರು ಮತಗಟ್ಟೆಗೆ ಬರುವಾಗ ಮಾಸ್ಕ್ ಧರಿಸಿರಬೇಕು, ಮತಗಟ್ಟೆ ಪ್ರವೇಶಿಸುವಾಗ ತಮ್ಮ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಂಡು ಮತ ಚಲಾಯಿಸಬೇಕು, ಕೋವಿಡ್ ಸುರಕ್ಷಾ ನಿಯಮಗಳ ಉಲ್ಲಂಘನೆ ಆಗದಂತೆ, ಅತ್ಯಂತ ಸುರಕ್ಷಿತವಾಗಿ ಮತದಾನ ಪ್ರಕ್ರಿಯೆಯನ್ನು ನಡೆಸುವಂತೆ ರಾಜ್ಯ ಚುನಾವಣಾ ಆಯೋಗ ಸೂಚನೆ ನೀಡಿದ್ದು, ಅದರಂತೆ ಜಿಲ್ಲಾಡಳಿತ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.