ಮತಗಟ್ಟೆಯಲ್ಲಿ ಮೂಲ ಸೌಕರ್ಯ ಖಾತ್ರಿಪಡಿಸಿಕೊಳ್ಳಿಸೆಕ್ಟರ್ ಅಧಿಕಾರಿಗಳಿಗೆ ಜಿಲ್ಲಾ ಚುನಾವಣಾಧಿಕಾರಿ ಸೂಚನೆ

ಕಲಬುರಗಿ,ಮಾ.14: ಮುಂಬರುವ ಸಾರ್ವತ್ರಿಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತಗಟ್ಟೆಯಲ್ಲಿ ಕನಿಷ್ಟ ಮೂಲಸೌಕರ್ಯ ಇರುವ ಬಗ್ಗೆ ಸೆಕ್ಟರ್ ಅಧಿಕಾರಿಗಳು ಖಾತ್ರಿ ಪಡಿಸಿಕೊಳ್ಳಬೇಕು ಎಂದು‌ ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ಸೂಚನೆ ನೀಡಿದರು.
ಮಂಗಳವಾರ ತಮ್ಮ‌ ಕಚೇರಿಯಲ್ಲಿ ಸೆಕ್ಟರ್ ಮತ್ತು ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಅವರು ವಿಶೇಷವಾಗಿ ಶೇ.100ರಷ್ಟು ವಿಕಲಚೇತನರು ಮತದಾನ ಮಾಡುವಂತೆ Ramp, ಶೌಚಾಲಯ ಇರುವ ಬಗ್ಗೆ ವಿಶೇಷ ಗಮನಹರಿಸಬೇಕು. ಇದಲ್ಲದೆ ಮತಗಟ್ಟೆಗೆ ಭೇಟಿ ನೀಡಿ ಅಲ್ಲಿ ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ ಬಗ್ಗೆಯೂ ಪರಿಶೀಲಿಸಬೇಕು ಎಂದರು.

ಚೆಕ್ ಪೋಸ್ಟ್ ಮೇಲೆ ನಿಗಾ:ಚುನಾವಣಾ ನೀತಿ ಸಂಹಿತೆ ನಿಯಮದಂತೆ ಅನಧಿಕೃತ ಹಣ, ಮದ್ಯ, ವಸ್ತುಗಳ ಸಾಗಾಟಕ್ಕೆ‌ ಕಡಿವಾಣ ಹಾಕಲು ಎಸ್.ಎಸ್.ಟಿ ತಂಡ‌ ರಚಿಸಿದ್ದು, ಶೀಘ್ರವೆ ಜಿಲ್ಲೆಯ ಗಡಿ ಮತ್ತು ಮಹಾರಾಷ್ಟ್ರ, ತೆಲಾಂಗಾಣಾ ಅಂತರ ರಾಜ್ಯ ಗಡಿಯಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಲಾಗುತ್ತಿದೆ. ಚೆಕ್ ಪೋಸ್ಟ್ ನಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ- ಸಿಬ್ಬಂದಿಗಳು ಇವುಗಳ ಮೇಲೆ ತೀವ್ರ‌ ನಿಗಾ ವಹಿಸಬೇಕು ಮತ್ತು ಅಕ್ರಮ ಚಟುವಟಿಕೆಗಳಿಗೆ ಸಂಪೂರ್ಣ ಬ್ರೆಕ್ ಹಾಕಬೇಕು ಎಂದರು.

ಸಭೆಯಲ್ಲಿ ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್.ಚೇತನ ಕುಮಾರ, ಎಸ್.ಪಿ. ಇಶಾ ಪಂತ್, ಡಿ.ಸಿ.ಪಿ ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಗಿರೀಶ್ ಡಿ. ಬದೋಲೆ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್ ಸೇರಿದಂತೆ ಸೆಕ್ಟರ್ ಅಧಿಕಾರಿಗಳು, ಎಸ್.ಎಸ್.ಟಿ. ತಂಡದ ಅಧಿಕಾರಿಗಳು ಮತ್ತಿತರರು ಇದ್ದರು.