
ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಮಾ.10: ಪ್ರಸಕ್ತ ವರ್ಷ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಇರುವುದರಿಂದ ಮತದಾರರ ನೋಂದಣಿ ಕಾರ್ಯ ಹಾಗೂ ಕಡ್ಡಾಯ ಮತದಾನ ಬಗ್ಗೆ ಹೆಚ್ಚೆಚ್ಚು ಜಾಗೃತಿ ಮೂಡಿಸಲಾಗುತ್ತಿದ್ದು, ಇದರ ಜತೆ
ಮತಗಟ್ಟೆಗಳು ಕೂಡ ಯಾವುದೇ ಸೌಕರ್ಯದಿಂದ ವಂಚಿತವಾಗದೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಸಿಬ್ಬಂದಿಗೆ ಚುನಾವಣಾ ಸ್ವೀಪ್ ಸಮಿತಿಯ ಜಿಲ್ಲಾ ಅಧ್ಯಕ್ಷರೂ ಆದ ವಿಜಯನಗರ ಜಿಲಾ ಪಂಚಾಯಿತಿಯ
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ. ಸದಾಶಿವ ಪ್ರಭು ಸೂಚಿಸಿದರು.
ಇಲ್ಲಿನ ಅಪ್ಪರ ಮೇಗಳಪೇಟೆಯ ಕನ್ನಡ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಉಪ್ಪಾರಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಗುರುವಾರ ಭೇಟಿ ನೀಡಿದ ಅವರು ಮತಗಟ್ಟೆಗಳನ್ನು ವೀಕ್ಷಿಸಿ
ಪರಿಶೀಲಿಸಿದರು.ಜಿಲ್ಲೆಯ ವಿವಿಧ ಮತಗಟ್ಟೆಗಳಲ್ಲಿ ಸುಣ್ಣ-ಬಣ್ಣ ಕಾಣದೇ ಕೊಠಡಿಗಳು ಹಾಗೆ ಇವೆ. ಪ್ರಸಕ್ತ ವರ್ಷ ಚುನಾವಣೆ ಇರುವುದರಿಂದ ಎಲ್ಲ ಮತಗಟ್ಟೆಗಳ ಅಂದ ಹೆಚ್ಚಿಸಿ ಆಕರ್ಷಕವಾಗಿ ಕಾಣಲು ಬೇಕಾದ ಅಗತ್ಯ ತಯಾರಿ ಮಾಡಿಕೊಳ್ಳಬೇಕು. ಇದರಿಂದ ಮತದಾರನ ಮನಸ್ಸು ಮತಗಟ್ಟೆಯತ್ತ ಕೈ ಬೀಸಿಕರೆಯುವಂತಾಗಬೇಕು. ಈ ಬಗ್ಗೆ ಸರ್ಕಾರಿಯ ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯಿತಿಗಳು
ಹಾಗೂ ಬಿಎಲ್‍ಒಗಳು ಕೂಡ ಕ್ರಮವಹಿಸಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ಪ್ರಕಾಶ್, ಪುರಸಭೆಯ ಮುಖ್ಯಾಧಿಕಾರಿ ಶಿವಕುಮಾರ ಎರಗುಡಿ, ಬಿಎಲ್‍ಒಗಳು ಇತರರಿದ್ದರು.
ಮಕ್ಕಳೊಂದಿಗೆ ಮಧ್ಯಾಹ್ನದ ಬಿಸಿಯೂಟ ಸವಿದ ಸಿಇಒ ಹರಪನಹಳ್ಳಿ ಪಟ್ಟಣದ ಉಪ್ಪಾರಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಸಿಇಒ ಬಿ.ಸದಾಶಿವ ಪ್ರಭು ಅವರು ಮಕ್ಕಳೊಂದಿಗೆ ಮಧ್ಯಾಹ್ನದ ಬಿಸಿಯೂಟ ಸವಿದು, ಆಹಾರದ ಗುಣ್ಣಮಟ್ಟವನ್ನು ಪರಿಶೀಲಿಸಿದರು. ಇನ್ನೂ ಮಕ್ಕಳ ತಟ್ಟೆಯಲ್ಲಿದ್ದ ಆಹಾರವನ್ನು ಮಕ್ಕಳಿಂದ ತಾವೇ ಕೇಳಿ ಪಡೆದು ಊಟ ಸವಿದಿದ್ದು ವಿಶೇಷವಾಗಿತ್ತು. ನಂತರ ಅಡುಗೆ ಕೋಣೆಗೆ ಭೇಟಿ ನೀಡಿದ ಅವರು ಪರಿಶೀಲಿಸಿ ಆಹಾರ ಹಾಗೂ ಕೋಣೆಯ ಸ್ವಚ್ಛತೆಯನ್ನು ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಓದಿದ ನಂತರ ಏನಾದರೂ ಸಾಧಿಸಲು ಛಲ ತೊಡಿ ಹರಪನಹಳ್ಳಿ ಪಟ್ಟಣದ ಅಪ್ಪರ ಮೇಗಳಪೇಟೆಯ ಕನ್ನಡ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿವಿಧ ತರಗತಿಗಳಿಗೆ ಭೇಟಿ ನೀಡಿ ಸಿಇಒ, ಮಕ್ಕಳೊಂದಿಗೆ
ಚರ್ಚಿಸಿದರು. ಪಾಲಕರು ನಿಮಗಾಗಿ ಸಾಕಷ್ಟು ಕಷ್ಟಪಡುತ್ತಿದ್ದಾರೆ. ಅವರು ದುಡಿದು ನಿಮಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ಸಮಯ ವ್ಯರ್ಥ ಮಾಡಬಾರದು. ಏನಾದರೂ ಸಮಸ್ಯೆ, ತಿಳಿಯದಿದ್ದರೆ
ಗುರುಗಳ ಬಳಿ ಚರ್ಚಿಸಬೇಕು. ಎಲ್ಲ ಮಕ್ಕಳು ಚೆನ್ನಾಗಿಓದಬೇಕು. ಓದಿ ದೊಡ್ಡವರಾದ ನಂತರ ಏನಾದರೂ ಸಾಧಿಸಲು ಛಲ ತೊಡಬೇಕು. ಉತ್ತಮ ಹುದ್ದೆಗೆ ಎಲ್ಲರೂ ಸೇರಬೇಕು ಎಂದು ಶಾಲಾ ಮಕ್ಕಳಿಗೆ ಕಿವಿಮಾತು
ಹೇಳಿದರು.