ಮತಗಟ್ಟೆಗಳಿಗೆ ಡಿಸಿ ಭೇಟಿ: ಪರಿಶೀಲನೆ

ಚಾಮರಾಜನಗರ:ಡಿ:22: ಜಿಲ್ಲೆಯ ಮತಗಟ್ಟೆಗಳಿಗೆ ತೆರಳಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಮತಗಟ್ಟೆ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿದರು. ತಾಲ್ಲೂಕಿನ ಮಂಗಲ ಗ್ರಾಮದ ಮತಗಟ್ಟೆಗೆ ಇಂದು ತೆರಳಿ ಅಗತ್ಯ ಕ್ರಮಗಳನ್ನು ವೀಕ್ಷಿಸಿದರು.
ಕೆಂಪನಪುರದಲ್ಲಿ ಬಿರುಸಿನ ಮತದಾನ: ತಾಲ್ಲೂಕಿನ ಕೆಂಪನಪುರ ಗ್ರಾಮದಲ್ಲಿ ಇಂದು ಗ್ರಾಮಸ್ಥರು ಬೆಳಿಗ್ಗೆ ವೇಳೆ ಉತ್ಸುಕತೆಯಿಂದ ಮತದಾನ ಮಾಡಿದ್ದು ಕಂಡುಬಂದಿತು. ಬೆಳಿಗ್ಗೆಯಿಂದಲೇ ಜಮೀನು ಕೆಲಸಗಳಿಗೆ ತೆರಳುವ ಮುಂಚೆ ಮತದಾನ ಮಾಡಿ ತೆರಳಿದ್ದು ಕಂಡುಬಂದಿತು. ಅಭ್ಯರ್ಥಿ ಕೆ.ಸಿ.ನಾಗರಾಜು ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದರು.
ಮಲ್ಲಯ್ಯನಪುರದಲ್ಲಿ ಬಿರುಸಿನ ಮತದಾನ:
ಇಂದು ಗ್ರಾಮದಲ್ಲಿ ಶತಾಯುಷಿ ಮುತ್ತಮ್ಮ ಸಿದ್ದಶೆಟ್ಟಿ ಅವರು ಮತದಾನ ಮಾಡಿದ್ದು ವಿಶೇಷವಾಗಿತ್ತು. ಯುವಕರನ್ನು ನಾಚಿಸುವಂತೆ ಇಂದು ಬೆಳಿಗ್ಗೆ ವೇಳೆ ಮತದಾನ ಮಾಡಲು ತೆರಳಿದ್ದು ನೋಡುಗರ ಗಮನ ಸೆಳೆಯಿತು. ಮತದಾನ ಎಂದರೇ ಸಂಭ್ರಮ- ಸಡಗರದ ಪ್ರಜಾತಂತ್ರದ ಹಬ್ಬ. ಈ ಉತ್ಸವದಲ್ಲಿ ಯುವ ಸಮುದಾಯಕ್ಕಿಂತ ವೃದ್ಧರ ಪಾಲ್ಗೊಳ್ಳಿವಿಕೆಯೇ ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡುಬಂದಿದೆ.
ಬೆಳಗ್ಗಿನ ಚಳಿ ಲೆಕ್ಕಿಸದೇ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಸಂಭ್ರಮದಿಂದ ಮತದಾನದಲ್ಲಿ ಪಾಲ್ಗೊಂಡು ಯುವ ಸಮುದಾಯದವರನ್ನೇ ನಾಚಿಸುತ್ತಿದ್ದರು. ಮೊಮ್ಮಕ್ಕಳು, ಊರುಗೋಲು, ವೀಲ್ ಚೇರ್ ಗಳ ಮೂಲಕ ಆಗಮಿಸಿ ಮತದಾನದ ಮಹತ್ವ ಸಾರಿದ್ದಾರೆ.
40-50 ವರ್ಷದಿಂದ ಮತದಾನ ಮಾಡುತ್ತಿದ್ದು ಯಾವ ಚುನಾವಣೆಯಲ್ಲೂ ನಮ್ಮ ಹಕ್ಕನ್ನು ಚಲಾಯಿಸದೇ ಬಿಟ್ಟಿಲ್ಲ, ನಮ್ಮ ಇಷ್ಟದ ಅಭ್ಯರ್ಥಿಗೆ ನಾವು ಮತ ಚಲಾಯಿಸಿಕೊಂಡು ಬರುತ್ತಿದ್ದೇವೆ, ನಾವು ಇದ್ದಷ್ಟು ದಿನ ಮತ ಚಲಾಯಿಸುತ್ತೇವೆ ಎಂದು ಮತದ ಮಹತ್ವವನ್ನು ವೃದ್ಧರು ಹಂಚಿಕೊಂಡರು.
ಮತದಾನದ ವಿವರ:
ಚಾಮರಾಜನಗರ 38.04%, ಗುಂಡ್ಲುಪೇಟೆ 26.38% ಒಟ್ಟಾರೆ 32.81% ಮತದಾನವಾಗಿದೆ.