ಮತಗಟ್ಟೆಗಳಲ್ಲಿ ಅರಳಿದ ರಂಗು, ರಂಗಿನ ಚಿತ್ತಾರ

ರೋಣ,ಏ29 : ರೋಣ ವಿಧಾನಸಭಾ ಕ್ಷೇತ್ರದಲ್ಲಿ ನೂರಕ್ಕೆ ನೂರರಷ್ಟು ಮತದಾನದ ಗುರಿಯನ್ನು ಹೊಂದಲಾಗಿದ್ದು, ಮತದಾರರನ್ನು ಸೆಳೆಯಲು ಮತಗಟ್ಟೆಗಳನ್ನು ಅಲಂಕೃತಗೊಳಿಸಲಾಗಿದೆ ಎಂದು ರೋಣ ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ರವಿ.ಎ.ಎನ್ ಹೇಳಿದರು.
ರೋಣ ಪಟ್ಟಣದ ಸಖಿ ಮತಗಟ್ಟೆಗೆ ಭೇಟಿ ನೀಡಿ, ವೀಕ್ಷಣೆ ಮಾಡಿ ಮಾತನಾಡಿದ ಅವರು 2023 ವಿಧಾನಸಭಾ ಚುನಾವಣೆಯನ್ನು ಶಾಂತಿಯುತ-ನ್ಯಾಯಸಮ್ಮತ ಮತ್ತು ಯಶಸ್ವಿಯಾಗಿ ನಡೆಸಲು ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿಶೇಷವಾಗಿ ಮತದಾನದ ಪ್ರಮಾಣವನ್ನು ಶೇಕಡಾ ನೂರಕ್ಕೆ, ನೂರರಷ್ಟು ಹೆಚ್ಚಿಸಲು ವಿಶೇಷ ಕಾರ್ಯಕ್ರಮಗಳ ಮೂಲಕ ಮತದಾರರಲ್ಲಿ ಜಿಲ್ಲಾ ಹಾಗೂ ತಾಲೂಕು ಸ್ವೀಪ್ ಸಮಿತಿಯಿಂದ ಜಾಗೃತಿ ಮೂಡಿಸಲಾಗಿದೆ.
ಇನ್ನೂ ಮತದಾರರನ್ನು ಮತಗಟ್ಟೆಯತ್ತ ಆಕರ್ಷಿಸಲು ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪರಿಸರ ಸ್ನೇಹಿ ಮತಗಟ್ಟೆ, ಸಖೀ ಮತಗಟ್ಟೆ, ಯುವ ಪ್ರೇರಣಾ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಹೊಳೆ ಮಣ್ಣೂರ ಗ್ರಾಮದ (ಮತಗಟ್ಟೆ ಸಂಖ್ಯೆ 31) ಪರಿಸರ ಸ್ನೇಹಿ ಮತಗಟ್ಟೆಯನ್ನು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾಡಲಾಗಿದೆ. ರೋಣ ಪಟ್ಟಣದ (ಮತಗಟ್ಟೆ 117) ಎಸ್ ಆರ್. ಪಾಟೀಲ ಬಾಲಕರ ಸರಕಾರಿ ಮಾದರಿ ಶಾಲೆಯಲ್ಲಿ, ವಿಶೇಷ ಕಲ್ಪನೆ ಆಧಾರಿತ (ಸಖಿ) ಮಾದರಿ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ.
ಇನ್ನೂ ಯುವ ಪ್ರೇರಣಾ ಮತಗಟ್ಟೆಯನ್ನು (ಮತಗಟ್ಟೆ 154) ಮಾರನಬಸರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಸ್ಥಾಪಿಸಲಾಗಿದೆ ಎಂದರು.
ಮತದಾರ ಜಾಗೃತಿ ರಂಗು, ರಂಗಿನ ಚಿತ್ತಾರ:
ರೋಣ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಾಪಿಸಲಾಗಿದ ಮತಗಟ್ಟೆಗಳು ವರ್ಲಿ ಕಲೆ ಸೇರಿದಂತೆ ಬಗೆ, ಬಗೆಯ ಚಿತ್ರಗಳ ಜೊತೆಯಲ್ಲಿ ಮತದಾನದ ಕುರಿತು ಘೋಷ ವಾಖ್ಯೆಗಳನ್ನು ಒಳಗೊಂಡು ಎಲ್ಲರ ಗಮನ ಸೆಳೆಯುತ್ತಿವೆ. ಪಿಂಕ್ ಬಣ್ಣದಿಂದ ಅಲಂಕೃತಗೊಂಡ ಸಖೀ ಮತಗಟ್ಟೆ, ಹಸಿರು ಬಣ್ಣದಿಂದ ಶೃಂಗಾರಗೊಂಡ ಪರಿಸರ ಸ್ನೇಹಿ ಮತಗಟ್ಟೆ, ಯುವ ಮತದಾರರನ್ನು, ವಿಶೇಷ ಚೇತನ ಮತದಾರರನ್ನು ಆಕರ್ಷಿಸುವ ರಂಗು, ರಂಗಿನ ಚಿತ್ತಾರದ ಚಿತ್ರಗಳು, ಗೊಡೆ ಬಹಗಳು ಎಲ್ಲರನ್ನೂ ಕೈ ಬೀಸಿ ಕರೆಯುವಂತಿವೆ. ಇನ್ನೂ ನನ್ನ ಮತ ಮಾರಾಟಕ್ಕಿಲ್ಲಾ, ನಿಮ್ಮ ಮತ ನಿಮ್ಮ ಭವಿಷ್ಯ, ಮತದಾನ ನಮ್ಮ ಹಕ್ಕು, ಕರ್ತವ್ಯ ಎಂಬ ಗೋಡೆ ಬರಹದ ಸಾಲುಗಳು ಮತದಾರರನ್ನು ಜಾಗೃತಗೊಳಿಸುವಂತಿವೆ.