“ಮತಕ್ಕೆ ಕೈ ಅಕ್ಕಿ ಗಾಳ”

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿಕುಟುಂಬದ ಸದಸ್ಯರಿಗೆ ಪ್ರತಿ ತಿಂಗಳು ೧೦ ಕೆ.ಜಿ. ಉಚಿತ ಅಕ್ಕಿ ನೀಡುವ ಕಾಂಗ್ರೆಸ್‌ನ ಮೂರನೇ ಗ್ಯಾರಂಟಿಯನ್ನು ಪಕ್ಷದ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರತಿ ಪಕ್ಷ ನಾಯಕ ಸಿದ್ಧ ರಾಮಯ್ಯರವರು ಪಕ್ಷದ ಕಛೇರಿಯಲ್ಲಿ ಘೋಷಣೆ ಮಾಡಿದರು. ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮತ್ತಿತರರು ಇದ್ದಾರೆ.

ಬೆಂಗಳೂರು,ಫೆ.೨೪:ಮುಂಬರುವ ವಿಧಾನಸಭಾ ಚುನಾವಣೆಗೆ ಈಗಾಗಲೇ ಭರವಸೆಯ ಮಹಾಪೂರ ಹರಿಸಿರುವ ರಾಜ್ಯ ಕಾಂಗ್ರೆಸ್ ಇಂದು ೩ನೇ ಆಶ್ವಾಸನೆ ಪ್ರಕಟಿಸಿದೆ, ಬಡ ಕುಟುಂಬದ ಪ್ರತಿ ಸದಸ್ಯನಿಗೆ ೧೦ ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುವುದಾಗಿ ಹೇಳುವ ಮೂಲಕ ೩ನೇ ಭರವಸೆ ಘೋಷಿಸಿದೆ.ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ೨೦೦ ಯುನಿಟ್ ಉಚಿತ ವಿದ್ಯುತ್ ಪೂರೈಕೆ ಹಾಗೂ ಪ್ರತಿಯೊಂದು ಕುಟುಂಬದ ಮಹಿಳೆಯರಿಗೆ ಮಾಸಿಕ ೨ ಸಾವಿರ ರೂ. ಹಣವನ್ನು ಗೃಹಲಕ್ಷ್ಮಿ ಯೋಜನೆ ಮೂಲಕ ನೀಡುವುದಾಗಿ ಪ್ರಕಟಿಸಿದ ಬೆನ್ನಲ್ಲೆ ಬಡ ಕುಟುಂಬದ ಸದಸ್ಯನಿಗೆ ಉಚಿತವಾಗಿ ೧೦ ಕೆಜಿ ನೀಡುವುದಾಗಿ ಘೋಷಿಸಿ ಮತದಾರರ ಮನಗೆಲ್ಲಲು ಕಾಂಗ್ರೆಸ್ ಇನ್ನಿಲದ ಕಸರತ್ತು ನಡೆಸಿದೆ.
ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಸೇರಿದಂತೆ ಇತರ ಸದಸ್ಯರು ಜಂಟಿ ಸುದ್ದಿಗೋಷ್ಠಿ ನಡೆಸಿ ಈ ವಿಷಯ ಪ್ರಸ್ತಾಪಿಸಿದರು.ಬೆಲೆಯಿಂದ ತತ್ತರಿಸಿರುವ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ೨ ಗ್ಯಾರಂಟಿ ಯೋಜನೆ ಮಾಡಿದ್ದೇವೆ. ಪ್ರಜಾಧ್ವನಿ ಯಾತ್ರೆ ವೇಳೆ ಜನರಿಂದ ನಮಗೆ ಒತ್ತಡವಿದೆ. ೭ ಕೆಜಿ ಅಕ್ಕಿಯನ್ನು ೫ ಕೆಜಿಗೆ ಇಳಿಸಿದ್ದಾರೆ ಎಂದು ಜನರು ಅಳಲು ತೋಡಿಕೊಂಡಿದ್ದಾರೆ. ಹೀಗಾಗಿ, ಕಾಂಗ್ರೆಸ್ ಪಕ್ಷ ೩ನೇ ಗ್ಯಾರಂಟಿ ಅನ್ನ ಭಾಗ್ಯ ಘೋಷಣೆ ಮಾಡುತ್ತಿದ್ದೇವೆ ಎಂದು ಹೇಳಿದರು.ಕೋವಿಡ್ ಸಂದರ್ಭದಲ್ಲಿ ಬಿಜೆಪಿಯವರು ಅಕ್ಕಿಯನ್ನು ೫ ಕೆಜಿಗೆ ಇಳಿಸಿದ್ದರು. ಇದರಿಂದ ಕೂಲಿ ಕಾರ್ಮಿಕರಿಗೆ ಅನ್ಯಾಯವಾಗಿತ್ತು. ಆದ್ದರಿಂದ ಪ್ರತಿ ಬಡ ಕುಟುಂಬದವರಿಗೆ ಉಚಿತವಾಗಿ ೧೦ ಕೆಜಿ ಅಕ್ಕಿ ನೀಡುವುದಾಗಿ ಸ್ಪಷ್ಟಪಡಿಸಿದರು.
ಇದೇ ವೇಳೆ ಮಾತನಾಡಿದ ಸಿದ್ದರಾಮಯ್ಯ ನಾನು ಮತ್ತು ಡಿ.ಕೆ. ಶಿವಕುಮಾರ್ ಇಬ್ಬರು ಗ್ಯಾರಂಟಿ ಕಾರ್ಡ್‌ಗಳಿಗೆ ಸಹಿ ಹಾಕಿ ಕಾರ್ಡ್‌ಗಳನ್ನು ಹಂಚುತ್ತಿದ್ದೇವೆ. ಆದರೆ, ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.ತಮ್ಮ ಸರ್ಕಾರದ ಅವಧಿಯಲ್ಲಿ ಮಾತು ಕೊಟ್ಟಂತೆ ನಡೆದುಕೊಂಡಿದ್ದೇವೆ. ಕೇಂದ್ರ ಸರ್ಕಾರ ೩ ರೂ.ಗೆ ಅಕ್ಕಿ ಕೊಡುತ್ತದೆ. ಅದನ್ನು ನಾವು ಖರೀದಿ ಮಾಡಿ ಉಚಿತವಾಗಿ ಕೊಡುತ್ತೇವೆ. ಆದರೆ, ಮುಖ್ಯಮಂತ್ರಿಗಳು ಇದು ಕೇಂದ್ರ ಸರ್ಕಾರದ ಯೋಜನೆ ಎಂದು ಸುಳ್ಳು ಹೇಳುತ್ತಿದ್ದಾರೆ. ಅವರಿಂದ ಸುಳ್ಳು ಹೇಳಿಸುವ ಸಲುವಾಗಿ ಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ.ಅದೇ ರೀತಿ ಆರ್‌ಎಸ್‌ಎಸ್ ಕೂಡ ಸುಳ್ಳಿನ ಫ್ಯಾಕ್ಟರಿ ಎಂದು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು.