ಮತಕೇಂದ್ರಗಳ ಫೋಟೋ ಅಪ್‌ಲೋಡ್ ಮಾಡಲು ಸೂಚನೆ


(ಸಂಜೆವಾಣಿ ಪ್ರತಿನಿಧಿಯಿಂದ)
ಕೂಡ್ಲಿಗಿ.ಏ. 10 :- ವಿಧಾನಸಭಾ ಚುನಾವಣೆ ಹಿನ್ನೆಲೆ ಕ್ಷೇತ್ರದ ಎಲ್ಲಾ ಮತಕೇಂದ್ರಗಳ ಸ್ಥಿತಿಗತಿ ಕುರಿತು ಫೋಟೋಗಳನ್ನು ತೆಗೆದು ಕೆಜಿಐಎಸ್ ಆಪ್‌ಗೆ  ಅಪ್‌ಲೋಡ್ ಮಾಡಬೇಕು ಎಂದು ಸೆಕ್ಟರ್ ಅಧಿಕಾರಿಗಳಿಗೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಬಿ.ಸದಾಶಿವ ಪ್ರಭು ಸೂಚನೆ ನೀಡಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸಂಜೆ ನಡೆದ ಚುನಾವಣಾ ಸಿದ್ಧತಾ ಸಭೆಯಲ್ಲಿ ಮಾತನಾಡುತ್ತಾ ಚುನಾವಣೆಗೆ ನಿಯೋಜನೆಗೊಂಡಿರುವ ವಿಎಸ್‌ಟಿ, ಎಸ್‌ಎಸ್‌ಟಿ, ಎಫ್‌ಎಸ್‌ಟಿ ಸೇರಿ ನಾನಾ ಅಧಿಕಾರಿಗಳ ತಂಡವು ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಚೆಕ್‌ಪೋಸ್ಟ್ಗಳಲ್ಲಿ ಸಂಚರಿಸುವ ವಾಹನಗಳ ತಪಾಸಣೆಗೆ ಮುತುವರ್ಜಿ ವಹಿಸಬೇಕು. ಅಲ್ಲದೆ, ಚೆಕ್‌ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಕುಡಿವ ನೀರು, ನೆರಳು, ಕುರ್ಚಿಗಳ ವ್ಯವಸ್ಥೆಯಲ್ಲಿ ಲೋಪವಾಗಬಾರದು ಎಂದು ಎಚ್ಚರಿಸಿದರು.
ಅಕ್ರಮ ಮದ್ಯ ಮಾರಾಟ ತಡೆಯಿರಿ: ಕ್ಷೇತ್ರದ ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವುದನ್ನು ತಡೆಯಬೇಕು. ಹೆಚ್ಚು ಹೆಚ್ಚು ದಾಳಿಗಳ ಮೂಲಕ ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳಬೇಕು ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರಿಗೆ  ಜಿಪಂ ಸಿಇಒ ಸದಾಶಿವ ಪ್ರಭು ತಾಕೀತು ಮಾಡಿದರು.
ಮತ ಜಾಗೃತಿಗೆ ಮಹತ್ವ: ಕಳೆದ ಚುನಾವಣೆಯಲ್ಲಿ ಕಡಿಮೆ ಮತದಾನ ಮಾಡಿರುವ ಕಡೆ ಬೈಕ್ ರ‍್ಯಾಲಿ, ಪಂಜಿನ ಮೆರವಣಿಗೆ, ಮಾನವ ಸರಪಳಿ ಮಾಡುವ ಮೂಲಕ ಮತದಾರರಿಗೆ ವೋಟಿನ ಮಹತ್ವ ತಿಳಿಸುವಂಥ ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚಾಗಿ ಹಮ್ಮಿಕೊಳ್ಳಬೇಕು. ಆ ಮೂಲಕ ಈ ಬಾರಿ ಕಡ್ಡಾಯವಾಗಿ ಮತ ಚಲಾಯಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಿ ಮತದಾನದ ಹೆಚ್ಚಳಕ್ಕೆ ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಸಿಇಒ ತಿಳಿಸಿದರು.
ಜಿಪಂ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಜಿಲ್ಲಾ ತರಬೇತುದಾರ ಸೋಮಪ್ಪ ಬಡಿಗೇರ್, ಚುನಾವಣಾಧಿಕಾರಿ ಈರಣ್ಣ ಬಿರಾದಾರ್, ಸಹಾಯಕ ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ಟಿ.ಜಗದೀಶ್, ತಾಪಂ ಇಒ ಹಾಗೂ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ವೈ.ರವಿಕುಮಾರ್, ತಾಲೂಕು ತರಬೇತುದಾರರಾದ ಸಿದ್ದೇಶ್, ನೀಲಕಂಠಾಚಾರಿ, ಪಿಎಸ್‌ಐಗಳಾದ ಕೂಡ್ಲಿಗಿ ಧನಂಜಯ, ಗುಡೇಕೋಟೆ ವಾಣಿ ಸೇರಿ 22 ಸೆಕ್ಟರ್ ಅಧಿಕಾರಿಗಳು, ಎಫ್‌ಎಸ್‌ಟಿ, ಎಸ್‌ಎಸ್‌ಟಿ, ವಿಎಸ್‌ಟಿ, ವಿವಿಟಿ ಅಧಿಕಾರಿಗಳು ಇದ್ದರು.