ಮಣ್ಣೊಳಗೆ ಮುಚ್ಚಿಹೋಗಿದ್ದ ಶಿವಲಿಂಗ ಪತ್ತೆ

ಕೋಟ, ಎ.೨- ಕಾಲನ ಹೊಡೆತಕ್ಕೆ ಸಿಕ್ಕಿ ಪಾಳುಬಿದ್ದು ನಶಿಸುತ್ತಾ ಹೋಗಿ ನೆಲಸಮಗೊಂಡಿದ್ದ ಬ್ರಹ್ಮಾವರ ತಾಲೂಕಿನ ಬಿಲ್ಲಾಡಿ ಗ್ರಾಮದ ನೈಲಾಡಿಯ ಕದ್ರಂಜೆ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಇದೀಗ ನಡೆಯುತಿದೆ. ಸುಮಾರು ೫೦ ವರ್ಷಗಳ ಹಿಂದೆ ಮಣ್ಣೊಳಗೆ ಹುದುಗಿ ಹೋಗಿದ್ದ ಶಿವಲಿಂಗವನ್ನು ನಿನ್ನೆ ಶಾಸ್ತ್ರೋತ್ರವಾಗಿ ಹೊರತೆಗೆದು ಮುಂದಿನ ಜೀರ್ಣೋದ್ಧಾರ ಕಾರ್ಯಗಳಿಗೆ ಚಾಲನೆ ನೀಡಲಾಯಿತು.
ಹಿಂದೆ ಈ ದೇವಸ್ಥಾನದಲ್ಲಿ ನಿತ್ಯಪೂಜೆ, ಶಿವರಾತ್ರಿ ಉತ್ಸವ, ರಂಗಪೂಜೆ ಮುಂತಾದ ದಾರ್ಮಿಕ ವಿಧಿಗಳು ನಡೆಯುತ್ತಿದ್ದವು. ದೇವಸ್ಥಾನದ ಪ್ರಾಂಗಣದಲ್ಲಿ ಪ್ರಾಥಮಿಕ ಶಾಲೆಯು ಇದ್ದು ಅದೆಷ್ಟೋ ವಿದ್ಯಾರ್ಥಿಗಳು ದೇವಾಲಯದ ಪ್ರಾಂಗಣದಲ್ಲೇ ವಿದ್ಯಾರ್ಜನೆ ಮಾಡಿದ್ದರು. ಆದರೆ ಕಾಲಕ್ರಮೇಣ ದೇವಸ್ಥಾನ ನಶಿಸುತ್ತಾ ಹೋಗಿ ನೆಲಸಮಗೊಂಡಿತ್ತು. ಕಳೆದ ಫೆಬ್ರವರಿಯಲ್ಲಿ ಮಾಧವನ್ ಪುದವೋಳ್ ಅವರಿಂದ ಅಷ್ಠಮಂಗಲ ಕಾರ್ಯಕ್ರಮ ನಡೆದಿದ್ದು, ಅನಂತರ ಊರಿನ ಹಿರಿಯರ ನೇತೃತ್ವದಲ್ಲಿ ಜೀರ್ಣೋದ್ಧಾರ ಸಮಿತಿಯ ರಚಿಸಿ ಈ ಪಾಳುಬಿದ್ದ ದೇಗುಲದ ನಿರ್ಮಾಣಕ್ಕೆ ಸಂಕಲ್ಪತೊಡಲಾಯಿತು. ಪೃಥ್ವೀರಾಜ್ ಶೆಟ್ಟಿ ಬಿಲ್ಲಾಡಿ ಅವರನ್ನು ಕದ್ರಂಜೆ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅದ್ಯಕ್ಷರನ್ನಾಗಿ ನೇಮಿಸಲಾಯಿತು. ಎ.೧ರ ಗುರುವಾರ ಬೆಳಿಗ್ಗೆ ಖನನಾದಿ ಪ್ರಾಯಶ್ಚಿತ್ತ ವಿಧಿವಿಧಾನಗಳ ಮೂಲಕ ೫೦ ವರ್ಷಗಳ ಹಿಂದೆ ಮಣ್ಣೊಳಗೆ ಹುದುಗಿದ್ದ ಮಹಾಲಿಂಗೇಶ್ವರನ ಶಿವಲಿಂಗವನ್ನು ಹೊರತೆಗೆಯಲಾಯಿತು.