-ನಾಗರಾಜ ಹೂವಿನಹಳ್ಳಿ
ಕಲಬುರಗಿ,ಜೂ.10-ನಗರವು ಸೇರಿದಂತೆ ಜಿಲ್ಲೆಯಾದ್ಯಂತ ಮಣ್ಣೆತ್ತಿನ ಅಮಾವಾಸ್ಯೆ ಆಚರಣೆಗೆ ಭರದ ಸಿದ್ಧತೆ ನಡೆದಿದೆ.
ಮಣ್ಣೆತ್ತಿನ ಅಮಾವಾಸ್ಯೆಯೆಂದರೆ ಹಳ್ಳಿಗಳಲ್ಲಿ ಎಲ್ಲಿಲ್ಲದ ಸುಗ್ಗಿ, ಸಡಗರ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರು ಸೇರಿದಂತೆ ಎಲ್ಲ ವರ್ಗದ ಜನರು ಪಾಲ್ಗೊಂಡು ಸಂಭ್ರಮದಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಭೂಮಿಯನ್ನು ಪೂಜಿಸುವ ರೈತಾಪಿ ಜನರು ಬಸವಣ್ಣನಿಗೂ ಅಷ್ಟೇ ಆರಾಧ್ಯ ಸ್ಥಾನವನ್ನು ನೀಡಿದ್ದಾರೆ. ಇದಕ್ಕಾಗಿಯೇ ಪ್ರತಿವರ್ಷ ಮಣ್ಣೆತ್ತಿನ ಅಮವಾಸ್ಯೆಯ ದಿನ ಎತ್ತುಗಳನ್ನು ಪೂಜಿಸಿ ಭಕ್ತಿ ಸಮರ್ಪಿಸುತ್ತಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಣ್ಣೆತ್ತಿನ ಅಮವಾಸ್ಯೆಯನ್ನು ಸಂಭ್ರಮ, ಸಡಗರದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಮುಂಗಾರು ಮಳೆಯ ಆಗಮನ ತಡವಾಗಿದ್ದರಿಂದ ರೈತರು ಕಂಗಾಲಾಗಿದ್ದರು. ಇದೀಗ ಮುಂಗಾರು ಮಳೆಯ ಆಗಮನವಾಗಿದೆ. ಇದರ ಮಧ್ಯೆಯೇ ಮಣ್ಣೆತ್ತಿನ ಅಮಾವಾಸ್ಯೆ ಆಗಮಿಸಿರುವುದು ರೈತರಲ್ಲಿ ಸಂಭ್ರಮ ಮನೆ ಮಾಡಿದೆ.
ಇತ್ತೀಚಿನ ದಿನಗಳಲ್ಲಿ ನಗರದಲ್ಲಿಯೂ ಮಣ್ಣೆತ್ತಿನ ಅಮಾವಾಸ್ಯೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಪ್ರತಿ ವರ್ಷ ನಗರದ ಸೂಪರ್ ಮಾರ್ಕೆಟ್ ರಸ್ತೆಯ ಶರಣಬಸವೇಶ್ವರ ಕೆರೆ (ಅಪ್ಪನ ಕೆರೆ) ಪಕ್ಕದಲ್ಲಿ ಮಹಾರಾಷ್ಟ್ರದ ಲಾತೂರನಿಂದ ಆಗಮಿಸುವ ಕೆಲ ಕುಟುಂಬಗಳು ಬಿಡಾರ ಹೂಡಿ ಮಣ್ಣು ಮತ್ತು ಪಿಒಪಿಯಿಂದ ತಯಾರಿಸಿದ ಬಣ್ಣಬಣ್ಣದ ಮಣ್ಣೆತ್ತುಗಳನ್ನು ಮಾರಾಟ ಮಾಡುತ್ತವೆ. ಈ ವರ್ಷವೂ ಸಹ ಆಗಮಿಸಿರುವ ಈ ಕುಟುಂಬಗಳು ಮಣ್ಣೆತ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಿವೆ. ಜೂ.18 ರಂದು ರವಿವಾರ ಮಣ್ಣೆತ್ತಿನ ಅಮಾವಾಸ್ಯೆ. ಹೀಗಾಗಿ ರೈತರು ಸೇರಿದಂತೆ ಸಾರ್ವಜನಿಕರು ಮಣ್ಣೆತ್ತುಗಳನ್ನು ಖರೀದಿಸುತ್ತಿದ್ದಾರೆ.
“ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ಮಣ್ಣೆತ್ತುಗಳನ್ನು ತಯಾರಿಸಲು ನಾಲ್ಕು ತಿಂಗಳು ಮೊದಲೇ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತದೆ. ವಿವಿಧ ಆಕಾರ ಮತ್ತು ಗಾತ್ರದ ಮಣ್ಣೆತ್ತುಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಚಿಕ್ಕಗಾತ್ರದ ಮಣ್ಣೆತ್ತುಗಳ ಜೋಡಿಗೆ ರೂ.25 ರಂತೆ ಮಾರಾಟ ಮಾಡಲಾಗುತ್ತಿದೆ. ಪ್ರತಿ ವರ್ಷ ಇಲ್ಲಿಗೆ ಆಗಮಿಸಿ ಮಣ್ಣೆತ್ತುಗಳನ್ನು ಮಾರಾಟ ಮಾಡುತ್ತಿದ್ದು, ಇದರಲ್ಲಿ ಅಷ್ಟೇನು ಲಾಭವಿಲ್ಲ. ಆದರೆ ಬದುಕು ನಡೆಯಬೇಕಲ್ಲ” ಎನ್ನುತ್ತಾರೆ ಲಾತೂರಿನಿಂದ ಮಣ್ಣೆತ್ತುಗಳನ್ನು ಮಾರಾಟ ಮಾಡಲು ಆಗಮಿಸಿರುವ ದೀಪಕ್ ಪೇಂಟರ್ ಅವರು. ಮಣ್ಣೆತ್ತುಗಳ ಗಾತ್ರಕ್ಕೆ ತಕ್ಕಂತೆ ಅವುಗಳ ಬೆಲೆ ನಿಗದಿ ಪಡಿಸಲಾಗುತ್ತದೆ. ಆದರೆ ಹೆಚ್ಚಿನ ಬೆಲೆಗೆ ಮಣ್ಣೆತ್ತುಗಳನ್ನು ಖರೀದಿಸಲು ಜನ ಹಿಂದೇಟು ಹಾಕುತ್ತಾರೆ. ಹೀಗಾಗಿ ಸಣ್ಣ ಗಾತ್ರದ ಮಣ್ಣೆತ್ತುಗಳು ತಯಾರಿಸಿ ಮಾರಾಟ ಮಾಡಲಾಗುತ್ತಿದೆ ಎನ್ನುತ್ತಾರೆ ದೀಪಕ್ ಅವರು.