ಮಣ್ಣೂರ ಅಗಲಿಕೆಯಿಂದ ದು:ಖವಾಗಿದೆ: ಮಲ್ಕಂಡಿ

(ಸಂಜೆವಾಣಿ ವಾರ್ತೆ)
ಚಿತ್ತಾಪುರ:ಅ.14: ಜಿಲ್ಲೆಯಲ್ಲಿ ಸುಮಾರು ವರ್ಷಗಳಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತರಾದ ಪಿ,ಎಮ್ ಮಣ್ಣೂರ ಅಗಲಿಕೆಯಿಂದ ಪತ್ರಕರ್ತರ ಬಳಗಕ್ಕೆ ತುಂಬಾ ದು:ಖವಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕ ಅಧ್ಯಕ್ಷ ಸಿದ್ದರಾಜ ಮಲ್ಕಂಡಿ ಹೇಳಿದರು.
ಪಟ್ಟಣದ ಪ್ರಾಥನಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಣ್ಣೂರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ಪತ್ರಿಕೆ ಸಂಪಾದಕತ್ವ ಮಾಡುವುದು ಎಂತಹ ಕಠಿಣ ಕೆಲಸ ಎನ್ನುವುದು ಗೊತ್ತಿದೆ. ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಸತ್ಯಕಾಮ ಎನ್ನುವ ಪತ್ರಿಕೆಯನ್ನು ತಮ್ಮ ಸಂಪಾದಕತ್ವದಲ್ಲಿ ಯಶಸ್ವಿಯಾಗಿ ಮುನ್ನೆಡೆಸಿದ್ದರು. ಅಲ್ಲದೆ ಜಿಲ್ಲಾ ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ಮತ್ತು ಸಾಹಿತ್ಯ ಲೋಕದಲ್ಲಿ ಅದರಲ್ಲೂ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾಗಿ ಸಾಹಿತ್ಯ ಲೋಕಕ್ಕೆ ತಮ್ಮ ಅನುಭವದ ಮೂಲಕ ಜಿಲ್ಲೆಯಲ್ಲಿ ಸಾಹಿತ್ಯ ಕ್ಷೇತ್ರ ಬೆಳೆಯಲು ತಮ್ಮ ಕೊಡುಗೆ ನೀಡಿದ್ದರು. ಇಂತಹ ಹಿರಿಯರ ಅಗಲಿಕೆಯಿಂದ ಜಿಲ್ಲೆಯಲ್ಲಿ ಒಬ್ಬ ಹಿರಿಯ ಸಾಹಿತಿಯನ್ನು ಕಳೆದುಕೊಂಡಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ವಿರೇಂದ್ರ ಕುಮಾರ ಕೊಲ್ಲೂರ, ರವಿಶಂಕರ ಬುರ್ಲಿ, ಮಹ್ಮದ ಮಶಾಕ, ರಾಯಪ್ಪ ಕೊಟಗಾರ, ಅನಂತನಾಗ ದೇಶಪಾಂಡೆ, ಜಗದೇವ ಕುಂಬಾರ, ಸಂತೋಷ ಕಟ್ಟಿಮನಿ, ಜಗದೇವ ದಿಗ್ಗಾಂವಕರ್, ಇದ್ದರು.