ಮಣ್ಣು ಪರೀಕ್ಷೆಗೆ ಸಕಾಲ..!

ಕಲಬುರಗಿ:ಎ.1: ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದಲ್ಲಿ ಜಿಲ್ಲೆಯ ರೈತರ ಅನುಕೂಲಕ್ಕಾಗಿ ಇರುವ ಮಣ್ಣು ಮತ್ತು ನೀರು ಪರೀಕ್ಷೆ ಕೇಂದ್ರದ ಪ್ರಯೋಜನ ಪಡೆದುಕೊಂಡು ಕೃಷಿಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವಂತೆ ಕೃಷಿ ವಿಜ್ಞಾನ ಕೇಂದ್ರವು ಸಲಹೆ ನೀಡಿದೆ. ಈ ಸಂಬಂಧ ಪ್ರಕಟಣೆ ನೀಡಿರುವ ಕೇಂದ್ರವು ಜಿಲ್ಲೆಯಲ್ಲಿ ಏಕ ಬೆಳೆ ಪದ್ದತಿ ಅನುಸರಿಸುವುದರಿಂದ ಮಣ್ಣಿನಲ್ಲಿ ಪೋಷಕಾಂಶಗಳ ಕೊರತೆ ಕಾಣಿಸುವುದರೊಂದಿಗೆ ಬೆಳೆಗಳ ಇಳುವರಿ ಕುಂಠಿತವಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ ಇಲ್ಲಿಯವರೆಗೆ ಜಿಲ್ಲೆಯ ವಿವಿಧ ಭಾಗಗಳಿಂದ ಅಂದಾಜು ಎರಡು ಸಾವಿರ ಮಣ್ಣು ಮತ್ತು ಐದು ನೂರಕ್ಕಿಂತಲೂ ಹೆಚ್ಚಿನ ನೀರು ಮಾದರಿಗಳ ಪರೀಕ್ಷೆ ಮಾಡಿ ಫಲಿತಾಂಶದ ಆಧಾರದ ಮೇಲೆ ಹೆಚ್ಚಿನ ಇಳುವರಿಗಾಗಿ ಕೈಗೊಳ್ಳಬೇಕಾದ ಕ್ರಮಗಳನ್ನು ರೈತರಿಗೆ ಮಣ್ಣು ಆರೋಗ್ಯ ಚೀಟಿ ನೀಡುವ ಮೂಲಕ ತಿಳಿಸಲಾಗುತ್ತಿದೆ.

ಜಿಲ್ಲೆಯಲ್ಲಿ ಬೆಳೆಯಲಾಗುವ ಹಲವು ಬೆಳೆಗಳಲ್ಲಿ ಲಘು ಪೋಷಕಾಂಶಗಳ ಕೊರತೆ ಕಂಡುಬಂದಿದೆ. ಹೆಚ್ಚು ರಾಸಾಯನಿಕ ಗೊಬ್ಬರಗಳ ಅವಲಂಬನೆಯಿಂದಾಗಿ ಹಾಗೂ ಸಾವಯವ ವಸ್ತುಗಳ (ತಿಪ್ಪೆಗೊಬ್ಬರ, ಎರೆಗೊಬ್ಬರ, ಕಾಂಪೋಷ್ಟ, ಹಸಿರೆಲೆಗೊಬ್ಬರ ಇತ್ಯಾದಿ) ಕಡಿಮೆ ಬಳಕೆಯಿಂದಾಗಿ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತದೆ. ಆದ್ದರಿಂದ ರೈತರು ತಮ್ಮ ಜಮೀನಿನ ಮಣ್ಣಿನ ಮಾದರಿಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ ಮಣ್ಣು ಪರೀಕ್ಷೆ ಫಲಿತಾಂಶದ ಆಧಾರದ ಮೇಲೆ ಬೆಳೆ ಆಯ್ಕೆ ಮತ್ತು ಬೆಳೆಗಳಿಗೆ ಅವಶ್ಯಕತೆಗೆ ತಕ್ಕಂತೆ ರಸಗೊಬ್ಬರಗಳ ಪ್ರಮಾಣವನ್ನು ನಿರ್ಧರಿಸಬಹುದು ಅಲ್ಲದೇ ಬೆಳೆಗಳಿಗೆ ಸಮತೋಲನ ಗೊಬ್ಬರಗಳ ಬಳಕೆ ಹಾಗೂ ಉತ್ಪಾದಕತೆಯನ್ನು ಅಂದರೆ ಮಣ್ಣು ಆರೋಗ್ಯವನ್ನು ನಿರಂತರವಾಗಿ ಕಾಪಾಡಿಕೊಂಡು ಹೋಗಲು ಸಾಧ್ಯವಾಗುತ್ತದೆ ಜೊತೆಗೆ ಪೋಷಕಾಂಶಗಳ ಶಿಫಾರಸ್ಸು ಮಾಹಿತಿಗಳನ್ನು ಮಣ್ಣು ಆರೋಗ್ಯ ಚೀಟಿ ರೂಪದಲ್ಲಿ ರೈತರಿಗೆ ವಿತರಣೆ ಮಾಡಲಾಗುವುದು. ಇದಲ್ಲದೆ ಭೂಮಿಯಲ್ಲಿ ಲಭ್ಯವಿರುವ ನೀರಿನ ಗುಣಮಟ್ಟ ಕೃಷಿಯಲ್ಲಿ ಮುಖ್ಯವಾಗಿದೆ. ಬೋರವೆಲ್ ಅಥವಾ ಬಾವಿಯ ಮೂಲಕ ನೀರಾವರಿ ಕೈಗೊಳ್ಳುತ್ತಿದ್ದರೆ ಒಮ್ಮೆಯಾದರೂ ಆ ನೀರಿನ ಪರೀಕ್ಷೆ ಮಾಡಿಸುವುದು ಉತ್ತಮ.

ರಾಸಾಯನಿಕ ಗೊಬ್ಬರಗಳ ಬೆಲೆ ಅಧಿಕವಾಗಿರುವ ಇಂದಿನ ದಿನಗಳಲ್ಲಿ ಪೋಷಕಾಂಶಗಳ ನಿರ್ವಹಣೆ ಮಾಡಿ ಅಗತ್ಯವಿದ್ದಷ್ಟು ಗೊಬ್ಬರಗಳನ್ನು ಕೊಡುವುದರಿಂದ ಇಳುವರಿ ಜೊತೆಗೆ ಕಡಿಮೆ ಖರ್ಚಿನ ಬೇಸಾಯವನ್ನು ಕೈಗೊಂಡು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳವುದಲ್ಲದೇ ಮಣ್ಣಿನ ಹಾಗೂ ಜನರ ಆರೋಗ್ಯದ ದೃಷ್ಟಿಯಿಂದಲೂ ಸಹ ಲಾಭದಾಯಕವಾಗಿದೆ. ಜಿಲ್ಲೆಯ ರೈತರು ಕೃಷಿ ವಿಜ್ಞಾನ ಕೇಂದ್ರÀÀದ ಮಣ್ಣು ಮತ್ತು ನೀರು ಪರೀಕ್ಷÁ ಕೇಂದ್ರದ ಪ್ರಯೋಜನ ಪಡೆದುಕೊಂಡು ಮಣ್ಣಿನ ಫಲವತ್ತೆಯನ್ನು ರಕ್ಷಿಸಿ ಕೃಷಿಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿಯ ಮಣ್ಣು ವಿಜ್ಞಾನಿ ಡಾ. ಶ್ರೀನಿವಾಸ ಬಿ. ವಿ ರವರನ್ನು ಸಂಪರ್ಕಿಸಬಹುದು.