ಮಣ್ಣಿನ ಸವಕಳಿ ತಡೆಗಟ್ಟಿ ಪರಿಸರ ಸಂರಕ್ಷಿಸಿ

ಕಲಬುರಗಿ:ಡಿ.05:ಭೂ ಮಂಡಲದ ಸಕಲ ಜೀವರಾಶಿಗಳಿಗೆ ಬೇಕಾದ ಆಹಾರದ ಉತ್ಪಾದನೆಗೆ ಕಾರಣವಾದ ಮಣ್ಣು ಬಹು ಅಮೂಲ್ಯವಾದ ನೈಸರ್ಗಿಕ ಸಂಪತ್ತಾಗಿದೆ. ಹಸಿರೆ ಉಸಿರಾಗಿರುದರಿಂದ, ಇಂತಹ ಹಸಿರು ಮತ್ತು ಉಸಿರನ್ನು ಪಡೆಯಬೇಕಾದರೆ, ಮಣ್ಣು ಸವಕಳಿಯಾಗಿ ನಾಶವಾಗದಂತೆ ಕಾಪಾಡಿದರೆ, ಪರಿಸರದ ಸಂರಕ್ಷಣೆಯಾಗುತ್ತದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ.ಶ್ರೀನಿವಾಸ ಬಿ.ವಿ ಹೇಳಿದರು.
ನಗರದ ಆಳಂದ ರಸ್ತೆಯ ಪಟ್ಟಣ ಗ್ರಾಮದ ಪ್ರಗತಿಪರ ರೈತ ಗುಂಡಪ್ಪ ಧೂಳಗೊಂಡ್ ಅವರ ತೋಟದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ‘ವಿಶ್ವ ಮಣ್ಣು ದಿನಾಚರಣೆ’ಯ ಕಾರ್ಯಕ್ರಮದಲ್ಲಿ ಕೈಯಲ್ಲಿ ಮಣ್ಣನ್ನು ಹಿಡಿದು, ಅದಕ್ಕೆ ನಮಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಒಂದು ಇಂಚು ಮಣ್ಣು ತಯಾರಾಗಬೇಕಾದರೆ 800-1000 ವರ್ಷಗಳು ಬೇಕಾಗುತ್ತವೆ. ವಾಯುಗುಣದ ಅಂಶಗಳಿಂದ ಶಿಲೆಗಳ ಶಿಥಿಲೀಕರಣ ಉಂಟಾಗಿ ಮಣ್ಣು ರಚಿಸಲ್ಪಡುತ್ತದೆ. ಇದು ಭೂಮಿಯ ಮೇಲೆ ಹುಂಡಿ-ಹುಂಡಿಯಾಗಿ ಹರಡಿರುವ ತೆಳುವಾದ ಪದರಿನ ರೂಪದಲ್ಲಿ ಕಂಡುಬರುತ್ತದೆ. ನಮ್ಮ ದೇಶದಲ್ಲಿ ಮೆಕ್ಕಲು, ಮರಭೂಮಿ, ತೆರಾಯಿ ಅಥವಾ ಪೀಟ್, ಬೂದಿ ಬಣ್ಣದ, ಪರ್ವತ, ಕಪ್ಪು,ಕೆಂಪು, ಜಂಬಟ್ಟಿಗೆ ಮಣ್ಣುಗಳು ಕಂಡುಬರುತ್ತವೆಯೆಂದು ಹೇಳಿದರು.
ರೈತರು ರಾಸಾಯನಿಕ ಮುಕ್ತ ಬೇಸಾಯ ಮಾಡಬೇಕಾಗಿದೆ. ಮಣ್ಣಿನ ಆರೋಗ್ಯ ಕಾಪಾಡಲು ಮಣ್ಣಿನ ಪರೀಕ್ಷೆ ಮಾಡಿಸಬೇಕು. ಮಣ್ಣಿಗೆ ತಕ್ಕಂತೆ ಬಿತ್ತನೆಯನ್ನು ಮಾಡಬೇಕು. ಸಾವಯುವ ಗೊಬ್ಬರದ ಬಳಕೆ ಮಾಡುವುದು, ಎಲ್ಲೆಡೆ ಅರಣ್ಯಗಳನ್ನು ಬೆಳೆಸುವದು ಸೇರಿದಂತೆ ಮುಂತಾದ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮಣ್ಣಿನ ಸವಕಳಿಯನ್ನು ತಡೆಗಟ್ಟಬಹುದಾಗಿದೆ. ಕೃಷಿ ತಜ್ಞರ ಸಲಹೆ-ಸೂಚನೆಗಳನ್ನು ಪಡೆದು ಬೆಳೆಯನ್ನು ಬೆಳೆಯಬೇಕು ಎಂದರು.
ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ವಿವಿಧ ಕಾರಣಗಳಿಂದ ಮಣ್ಣು ಇಂದು ನಾಶವಾಗುತ್ತಿದೆ. ಇದನ್ನು ರಕ್ಷಣೆ ಮಾಡಿ, ಮುಂದಿನ ಜನಾಂಗಕ್ಕೆ ಇಂತಹ ಸಂಪತ್ತನ್ನು ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕು ಎಂಬ ಉದ್ದೇಶದಿಂದ ನಮ್ಮ ಬಳಗವು ಕಳೆದ ನಾಲ್ಕು ವರ್ಷಗಳಿಂದ ವಿವಿದೆಡೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಮಣ್ಣು ವಿಜ್ಞಾನಿಗಳಿಂದ ರೈತರಿಗೆ ಅನೇಕ ಸಲಹೆ-ಸೂಚನೆಗಳು, ಮಾಹಿತಿಯನ್ನು ಒದಗಿಸಿಕೊಡುತ್ತಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ರೈತ ಗುಂಡಪ್ಪ ಧೂಳಗೊಂಡ, ಪ್ರಮುಖರಾದ ನರಸಪ್ಪ ಬಿರಾದಾರ ದೇಗಾಂವ, ವೇದಮೂರ್ತಿ ನೀಲಕಂಠಯ್ಯ ಹಿರೇಮಠ, ಶರಣಬಸಪ್ಪ ಮಾಲಿಬಿರಾದಾರ ದೇಗಾಂವ, ಎಸ್.ಎಸ್.ಬಡದಾಳ, ಪ್ರಕಾಶ ಸರಸಂಬಿ, ರಾಚಪ್ಪ ಪಟ್ಟಣ, ಬಸವಂತರಾಯ ಮಾಲಿಪಾಟೀಲ, ವೆಂಕಟೇಶ ದೇಶಮುಖ, ಸಿದ್ದು ಜಿ.ಧೂಳಗೊಂಡ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.