ಮಣಿಪುರ 12 ಉಗ್ರರ ಬಿಡುಗಡೆ

ಇಂಫಾಲ,ಜೂ.೨೫:ಮಣಿಪುರ ನಿಷೇಧಿತ ಉಗ್ರಗಾಮಿ ಗುಂಪು ಕಂಗ್ಲೇಯಿ ಯಾವೋಲ್ ಕನ್ನಾಲುಪ್ (ಕೆವೈಕೆಎಲ್)ಗೆ ಸೇರಿದ ಮಹಿಳೆಯರ ನೇತೃತ್ವದ ೧,೫೦೦ ಮಂದಿಯ ಗುಂಪು ಸೇನೆಯನ್ನು ಸುತ್ತುವರೆದು ೧೨ ಮಂದಿ ಬಂಧಿತ ಉಗ್ರರನ್ನು ಬಿಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಹತ್ತಿಕ್ಕಲು ಸೇನಾಪಡೆಗಳು ಶಾಂತಿ ಸ್ಥಾಪನೆಗೆ ಹರಸಾಹಸ ನಡೆಸುತ್ತಿದ್ದರೂ ಹಿಂಸಾಚಾರ ನಿಂತಿಲ್ಲ. ಶಾಂತಿ ಸ್ಥಾಪನೆ ಮರೀಚಿಕೆಯಾಗಿ ಪರಿಣಮಿಸಿದೆ.
ಇದರ ಬೆನ್ನಲ್ಲೆ ಉಗ್ರಗಾಮಿ ಸಂಘಟನೆಯ ಮಹಿಳೆಯರ ಗುಂಪು ಸೇನೆಯನ್ನೇ ಗುರಿಯಾಗಿರಿಸಿಕೊಂಡು ೧೨ ಮಂದಿ ಉಗ್ರರನ್ನು ಬಿಡಿಸಿಕೊಂಡು ಬಂದಿದ್ದಾರೆ. ೧.೫೦೦ಕ್ಕೂ ಹೆಚ್ಚು ಮಂದಿಯಿದ್ದ ಗುಂಪು ಸೇನೆ, ಈ ಉಗ್ರರನ್ನು ಗುರಿಯಾಗಿರಿಸಿಕೊಂಡ ಪ್ರದೇಶವನ್ನೇ ಸುತ್ತುವರೆದು ಕಾರ್ಯಾಚರಣೆ ಮುಂದುವರೆಸದಂತೆ ತಡೆ ಹಿಡಿದಿದ್ದಾರೆ.
ಒಂದು ವೇಳೆ ಕಾರ್ಯಾಚರಣೆಗಿಳಿದಿದ್ದರೆ ಹಿಂಸಾಚಾರ ಸಂಭವಿಸುತ್ತಿತ್ತು. ಈ ರಕ್ತಪಾತವನ್ನು ತಡೆಯುವ ಸಲುವಾಗಿ ಮುನ್ನೆಚ್ಚೆರಿಕೆ ಕ್ರಮವಾಗಿ ೧೨ ಮಂದಿ ಬಂಧಿತ ಉಗ್ರರನ್ನು ಬಿಡುಗಡೆ ಮಾಡಲಾಯಿತು ಎಂದು ಅಧಿಕೃತಪ್ರಕಟಣೆ ಬಿಡುಗಡೆ ಮಾಡಿದೆ.
ನಿನ್ನೆ ಬೆಳಿಗ್ಗೆ ಇಂಫಾಲ ಜಿಲ್ಲೆಯ ಇಥಮ್ ಗ್ರಾಮದಲ್ಲಿ ನಿರ್ದಿಷ್ಟ ಗ್ರಾಮದಲ್ಲಿ ಗುಪ್ತಚರ ಇಲಾಖೆ ಮಾಹಿತಿಯ ಮೇರೆಗೆ ಶೋಧ ಕಾರ್ಯಾಚರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಭದ್ರತಾ ಪಡೆಗಳು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿತು.
ಸ್ಥಳೀಯರಿಗೆ ಯಾವುದೇ ತೊಂದರೆಯಾಗಬಾರದೆಂಬ ಕಾರಣಕ್ಕೆ ಸೇನೆ ಕಾರ್ಯಾಚರಣೆ ಪ್ರಾರಂಭಿಸುವ ಮುನ್ನ ಸೂಕ್ಷ್ಮ ಪ್ರದೇಶವನ್ನು ಸುತ್ತುವರೆದು ೧೨ ಮಂದಿ ಉಗ್ರರನ್ನು ಸೆರೆ ಹಿಡಿಯಲಾಯಿತು. ಈ ಸುದ್ದಿ ತಿಳಿದ ಕಂಗ್ಲೇಯಿ ಯಾವೋಲ್ ಕನ್ನಾಲುಪ್ (ಕೆವೈಕೆಎಲ್)ಗೆ ೧,೫೦೦ಕ್ಕೂ ಹೆಚ್ಚು ಮಹಿಳೆಯರ ಗುಂಪು ಇಡೀ ಪ್ರದೇಶವನ್ನು ಸುತ್ತುವರೆದರು.
ಈ ಪ್ರದೇಶವನ್ನು ತೊರೆಯದಿದ್ದರೆ ಕಾನೂನು ರೀತಿ ಆಕ್ರಮಣದ ನಡೆಸಬೇಕಾಗುತ್ತದೆ ಎಂದು ಜನರ ಗುಂಪಿಗೆ ಮನವಿ ಮಾಡಿದರು. ಆದರೆ, ಕಾರ್ಯಾಚರಣೆಗೆ ಮಹಿಳೆಯರ ಗುಂಪು ತೀವ್ರ ಅಡ್ಡಿಪಡಿಸಿದರು.
ಪರಿಸ್ಥಿತಿ ಕೈ ಮೀರುವ ಹಂತ ತಲುಪುವ ಸೂಚನೆಯನ್ನರಿತ ಸೇನೆ ೧೨ ಮಂದಿ ಉಗ್ರರನ್ನು ಸ್ಥಳೀಯ ನಾಯಕನಿಗೆ ಹಸ್ತಾಂತರಿಸಿದೆ ಎಂದು ಸೇನೆ ಮಾಹಿತಿ ನೀಡಿದೆ.
ಕಾರ್ಯಾಚರಣೆ ಉಸ್ತುವಾರಿ ವಹಿಸಿರುವ ಕಮಾಂಡರ್ ಒಬ್ಬರು ಪ್ರತಿಕ್ರಿಯೆ ನೀಡಿ ಸೇನೆ ಕೈಗೊಂಡಿರುವ ಪ್ರಬುದ್ಧ ನಿರ್ಧಾರ ಇದಾಗಿದೆ ಎಂದು ತಿಳಿಸಿದ್ದಾರೆ.