ಮಣಿಪುರ ೧೧ ಮತಗಟ್ಟೆ ಕೇಂದ್ರಗಳಲ್ಲಿ ಮರು ಮತದಾನ

ಇಂಫಾಲ,ಏ.೨೨- ಈಶಾನ್ಯ ರಾಜ್ಯದ ಮಣಿಪುರದ ಇನ್ನರ್ ಲೋಕಸಭೆ ಚುನಾವಣೆಯಲ್ಲಿ ನಡೆದ ೧೧ ಮತಗಟ್ಟೆಗಳ ಚುನಾವಣೆಯನ್ನು ಅಸಿಂಧು ಎಂದು ಚುನಾವಣಾ ಆಯೋಗ ಘೋಷಿಸಿದ್ದ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯಲ್ಲಿ ಈ ಮತಗಟ್ಟೆಗಳಲ್ಲಿ ಇಂದು ಬೆಳಗ್ಗೆಯಿಂದಲೇ ಮರು ಮತದಾನ ಆರಂಭವಾಗಿದೆ.ಮೊದಲ ಹಂತದ ಮತದಾನ ಏಪ್ರಿಲ್ ೧೯ ರಂದು ನಡೆದ ಮತದಾನದ ಸಮಯದಲ್ಲಿ ಗುಂಡಿನ ಚಕಮಕಿ ನಡೆದು ಹಿಂಸಾಚಾರಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಜೊತೆಗೆ ಮತಯಂತ್ರಗಳನ್ನು ಕಸಿಯುವ ಪ್ರಯತ್ನ ನಡೆಸಿದ್ದರಿಂದ ೧೧ ಮತಗಟ್ಟೆಯಲ್ಲಿ ನಡೆದ ಮತದಾನ ಅಸಿಂಧುಗೊಳಿಸಿ ಇಂದು ಮರುಮತದಾನ ನಡೆಯುತ್ತಿದೆ.ಗುಂಡಿನ ಚಕಮಕಿ ಮತ್ತು ಘರ್ಷಣೆಯಲ್ಲಿ ಹಿಂಸಾಚಾರದ ಘಟನೆಗಳ ನಂತರ ಚುನಾವಣಾ ಆಯೋಗ, ಮತದಾನ ನ್ಯಾಯಸಮ್ಮತವಾಗಿಲ್ಲ ಎಂದು ಅನೂರ್ಜಿತಗೊಳಿಸಿದ ನಂತರ ಇಂದು ಬಿಗಿ ಭದ್ರತೆಯೊಂದಿಗೆ ಮತದಾನ ನಡೆಯುತ್ತಿದೆ.ಮರುಮತದಾನ ನಡೆಯುತ್ತಿರುವ ಹಿಂಸಾಚಾರ ಪೀಡಿತ ಮತಗಟ್ಟೆಗಳಾದ ಖುರೈ ಕ್ಷೇತ್ರದ ಮೊಯಿರಂಗ್ಯಾಂಪು ಸಾಜೆಬ್ ಮತ್ತು ತೊಂಗಮ್ ಲೈಕೈ, ಕ್ಷೇತ್ರಗಾವೊದಲ್ಲಿ ನಾಲ್ಕು ಮತ್ತು ಇಂಫಾಲ್ ಪೂರ್ವ ಜಿಲ್ಲೆಯ ತೊಂಗ್ಜುನಲ್ಲಿ ಒಂದು ಮತ್ತು ಉರಿಪೋಕ್‌ನಲ್ಲಿ ಮೂರು ಮತ್ತು ಇಂಫಾಲ್ ಪಶ್ಚಿಮ ಜಿಲ್ಲೆಯ ಕೊಂತೌಜಮ್‌ನಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಭದ್ರತೆ ಒದಗಿಸಲಾಗಿದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.ಕೆಲವು ಮತಗಟ್ಟೆಗಳಲ್ಲಿ ಗುಂಡಿನ ದಾಳಿ, ಬೆದರಿಕೆ, ಇವಿಎಂಗಳನ್ನು ನಾಶಪಡಿಸಿದ ಘಟನೆಗಳು ಮತ್ತು ಬೂತ್ ವಶಪಡಿಸಿಕೊಂಡ ಆರೋಪಗಳು ಸಂಘರ್ಷ ಪೀಡಿತ ಮಣಿಪುರದಿಂದ ವರದಿಯಾಗಿದ್ದು,ಹೀಗಾಗಿ ಕಳೆದ ಶುಕ್ರವಾರ ಮಣಿಪುರದ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಶೇಕಡಾ ೭೨ ರಷ್ಟು ಮತದಾನವಾಗಿತ್ತು ಅದನ್ನು ರದ್ದು ಮಾಡಿ ಇದೀಗ ಮರು ಮತದಾನ ನಡೆಯುತ್ತಿದೆ.ಇದಕ್ಕೂ ಮುನ್ನ ೪೭ ಮತಗಟ್ಟೆಗಳಲ್ಲಿ ಬೂತ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಕಾಂಗ್ರೆಸ್ ಮರು ಮತದಾನಕ್ಕೆ ಒತ್ತಾಯಿಸಿತ್ತು.ಮಣಿಪುರ ಕಾಂಗ್ರೆಸ್ ಅಧ್ಯಕ್ಷ ಕೆ.ಮೇಘಚಂದ್ರ ಮಾತನಾಡಿ, ಮಣಿಪುರ ಕ್ಷೇತ್ರದಲ್ಲಿ ೩೬ ಮತಗಟ್ಟೆ ಮತ್ತು ಮಣಿಪುರ ಕೇಂದ್ರ ಲೋಕಸಭಾ ಕ್ಷೇತ್ರದ ೧೧ ಮತಗಟ್ಟೆಗಳಲ್ಲಿ ಮರು ಮತದಾನಕ್ಕೆ ಒತ್ತಾಯಿಸಿ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಲಾಗಿತ್ತು. ಚುನಾವಣಾ ಆಯೋಗ ಪರಿಶೀಲಿಸಿದ ನಂತರ ಮರುಮತದಾನ ನಡೆಸುತ್ತಿದೆ.ಹೊರ ಮಣಿಪುರದ ಉಳಿದ ೧೩ ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಏಪ್ರಿಲ್ ೨೬ ರಂದು ಮತದಾನ ನಡೆಯಲಿದೆ. ಜೂನ್ ೪ ರಂದು ಮತ ಎಣಿಕೆ ನಡೆಯಲಿದೆ.