ಮಣಿಪುರ ಹಿಂಸಾಚಾರ:102 ಕೋಟಿ ಪರಿಹಾರ ಪ್ಯಾಕೇಜ್

ನವದೆಹಲಿ,ಜೂ. ೯- ಜನಾಂಗೀಯ ಹಿಂಸಾಚಾರದಿಂದ ನಿರಾಶ್ರಿತರಾದ ಮಣಿಪುರದ ಜನರಿಗೆ ಸುಮಾರು ೧೦೨ ಕೋಟಿ ರೂಪಾಯಿಗಳ ಪರಿಹಾರ ಪ್ಯಾಕೇಜ್ ನೀಡಲು ಕೇಂದ್ರ ಗೃಹ ಸಚಿವಾಲಯ ಅನುಮೋದಿಸಿದೆ.
ಗೃಹ ಸಚಿವ ಅಮಿತ್ ಶಾ ಅವರು ಕಳೆದ ವಾರ ಮಣಿಪುರಕ್ಕೆ ಭೇಟಿ ನೀಡಿದಾಗ, ಹಿಂಸಾಚಾರದಿಂದ ಹಾನಿಗೊಳಗಾದ ಎಲ್ಲಾ ಸಮುದಾಯಗಳ ಜನರಿಗೆ ಪರಿಹಾರ ಪ್ಯಾಕೇಜ್‌ಗಾಗಿ ಕೇಂದ್ರಕ್ಕೆ ಔಪಚಾರಿಕ ಮನವಿ ಕಳುಹಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ್ದರು.
ಮಣಿಪುರ ಸರ್ಕಾರದ ಭದ್ರತಾ ಸಲಹೆಗಾರ ಕುಲ್ದೀಪ್ ಸಿಂಗ್ ಅವರು ಮಾತನಾಡಿ, ರಾಜ್ಯದಲ್ಲಿ ಸತತ ಎರಡನೇ ದಿನವೂ ಶಾಂತಿಯುತ ಪರಿಸ್ಥಿತಿ ಮುಂದುವರೆದಿದೆ, ಕಳೆದ ೪೮ ಗಂಟೆಗಳಲ್ಲಿ ಯಾವುದೇ ಹಿಂಸಾಚಾರದ ಘಟನೆ ವರದಿಯಾಗಿಲ್ಲ ಎಂದಿದ್ದಾರೆ.
ರಾಜ್ಯದ ಕಣಿವೆ ಮತ್ತು ಗುಡ್ಡಗಾಡು ಪ್ರದೇಶಗಳೆರಡರಲ್ಲೂ ಕೂಂಬಿಂಗ್ ಕಾರ್ಯಾಚರಣೆ ಮುಂದುವರೆದಿದ್ದು, ಇಂಫಾಲ್ ಪೂರ್ವ ಜಿಲ್ಲೆಯ ಪೊರೊಂಪತ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ೨೭ ಬಂದೂಕುಗಳು, ೨೪೫ ಬುಲೆಟ್‌ಗಳು ಮತ್ತು ೪೧ ಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಕಳೆದ ೨೪ ಗಂಟೆಗಳಲ್ಲಿ ಬಿಷ್ಣುಪುರ ಜಿಲ್ಲೆಯಲ್ಲಿ ಒಂದು ಶಸ್ತ್ರಾಸ್ತ್ರ ಮತ್ತು ಎರಡು ಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಮಣಿಪುರದಾದ್ಯಂತ ಒಟ್ಟು ೮೯೬ ಶಸ್ತ್ರಾಸ್ತ್ರಗಳು, ೧೧,೭೬೩ ಮದ್ದುಗುಂಡುಗಳು ಮತ್ತು ೨೦೦ ವಿವಿಧ ರೀತಿಯ ಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ರಾಜ್ಯದ ಹಲವು ಭಾಗಗಳಲ್ಲಿ ಪಡೆಗಳು ಕೂಂಬಿಂಗ್ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಐದು ಕಣಿವೆ ಜಿಲ್ಲೆಗಳಲ್ಲಿ ೧೨ ಗಂಟೆಗಳ ಕಾಲ ಮತ್ತು ನೆರೆಯ ಗುಡ್ಡಗಾಡು ಜಿಲ್ಲೆಗಳಲ್ಲಿ ೮-೧೦ ಗಂಟೆಗಳ ಕಾಲ ಕರ್ಫ್ಯೂ ಸಡಿಲಿಸಲಾಗಿದೆ. ಇನ್ನು ಆರು ಬೆಟ್ಟದ ಜಿಲ್ಲೆಗಳಲ್ಲಿ ಕರ್ಫ್ಯೂ ಮುಂದುವರಿದಿದೆ ಎಂದಿದ್ದಾರೆ.
ರಾಷ್ಟ್ದೀಯ ಹೆದ್ದಾರಿ ೩೭ ರ ಉದ್ದಕ್ಕೂ ಅಗತ್ಯ ವಸ್ತುಗಳ ಸಾಗಣೆ ಖಾತ್ರಿಪಡಿಸಲಾಗಿದೆ, ೨೯೪ ಖಾಲಿ ವಾಹನಗಳು ಇಂಫಾಲ್‌ನಿಂದ ಜಿರಿಬಾಮ್‌ಗೆ ಹೊರಡಲು, ೨೨೦ ಲೋಡ್ ವಾಹನಗಳು ನೋನಿಯಿಂದ ಹೊರಡಲು ಮತ್ತು ೧೯೮ ಲೋಡ್ ಮಾಡಿದ ಟ್ಯಾಂಕರ್‌ಗಳು ಮತ್ತು ಟ್ರಕ್‌ಗಳು ಜಿರಿಬಾಮ್‌ನಿಂದ ಹೊರಡಲು ಸಾಧ್ಯವಾಗಿದೆ ಎಂದಿದ್ದಾರೆ.

ಮಣಿಪುರದ ಸಚಿವರು ಮತ್ತು ಶಾಸಕರು ಕೂಡ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಪ್ರವಾಸ ಮಾಡುತ್ತಿದ್ದಾರೆ ಮತ್ತು ಶಾಂತಿ ಕ ಪುನಃಸ್ಥಾಪಿಸಲು ಸಹಾಯ ಮಾಡಲು ಸಾರ್ವಜನಿಕರಿಗೆ ಮತ್ತು ನಾಗರಿಕ ಸಮಾಜ ಸಂಸ್ಥೆಗಳಿಗೆ ಮನವಿ ಮಾಡುತ್ತಿದ್ದಾರೆ ಎಂದಿದ್ದಾರೆ.