ಮಣಿಪುರ ಹಿಂಸಾಚಾರ: ಮೋದಿ ಹೇಳಿಕೆಗೆ ಖರ್ಗೆ ಆಗ್ರಹ

ನವದೆಹಲಿ,ಜು.೨೪- ಮಣಿಪುರ ಹಿಂಸಾಚಾರದ ಬಗ್ಗೆ ಸಂಸತ್ತಿನ ಒಳಗೆ ಸಮಗ್ರ ಹೇಳಿಕೆ ನೀಡುವುದು ಪ್ರಧಾನಿ ನರೇಂದ್ರ ಮೋದಿ ಅವರ ಕರ್ತವ್ಯ ಎಂದು ಹೇಳಿರುವ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಂಸತ್ತಿನ ಅಧಿವೇಶನ ನಡೆಯುತ್ತಿರುವಾಗ ಪ್ರಧಾನಿ ಸದನದ ಹೊರಗೆ ಹೇಳಿಕೆ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ವಾಗ್ದಾಳಿ ನಡೆಸಿದ್ದಾರೆ.ಮಣಿಪುರದ ಪರಿಸ್ಥಿತಿ ಕುರಿತು ಉಭಯ ಸದನಗಳಲ್ಲಿ ಪ್ರಧಾನಿ ಹೇಳಿಕೆ ನೀಡಬೇಕು. ಈ ಕುರಿತು ರಾಜ್ಯಸಭಾ ಸಭಾಪತಿ ಮತ್ತು ಲೋಕಸಭೆ ಅಧ್ಯಕ್ಷರಿಗೆ ಮನವಿ ಮಾಡಿದ್ದೇವೆ ಎಂದು ಹೇಳಿದ್ದಾರೆ.ಸಂಸತ್ತಿನ ಹೊರಭಾಗದ ಗಾಂಧಿ ಪ್ರತಿಮೆ ಬಳಿ ಇಂದು ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಅವರು , ಮಣಿಪುರ ಘಟನೆಯ ಬಗ್ಗೆ ಸಂಸತ್ತಿನ ಒಳಗೆ ಉತ್ತರ ನೀಡದೆ ಪಲಾಯನವಾದದ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ದೂರಿದ್ದಾರೆ,ಸದನದಲ್ಲಿ ನಿಯಮ ೨೬೭ರ ಅಡಿಯಲ್ಲಿ ಚರ್ಚೆ ನಡೆಯಬೇಕು. ಆದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಚಿವರು ಅಲ್ಪಾವಧಿ ಚರ್ಚೆ ಮಾತ್ರ ಎಂದು ಹೇಳುತ್ತಾರೆ, ಮತ್ತೊಬ್ಬರು ಕೇವಲ ಅರ್ಧ ಗಂಟೆ ಚರ್ಚೆ ಎಂದು ಹೇಳುತ್ತಾರೆ. ನಿಯಮ ೨೬೭ ಚರ್ಚೆ ಗಂಟೆಗಟ್ಟಲೆ ನಡೆಯಬೇಕು ಮತ್ತು ಮತದಾನ ಆಗಬೇಕು ಎಂದು ಆಗ್ರಹಿಸಿದ್ದಾರೆ,
ಮೊದಲು ಪ್ರಧಾನಿಯವರಿಂದ ವಿವರವಾದ ಹೇಳಿಕೆ ನೀಡಬೇಕು ಮತ್ತು ೨೬೭ ರ ಅಡಿಯಲ್ಲಿ ಸಂಸತ್ತಿನಲ್ಲಿ ಚರ್ಚೆಯಾಗಬೇಕು ಎಂದ ಅವರು ಮಣಿಪುರದ ಮೇಲಿನ ತಮ್ಮ ಸಾಂವಿಧಾನಿಕ ಜವಾಬ್ದಾರಿ ಮತ್ತು ಹೊಣೆಗಾರಿಕೆಯಿಂದ ಮೋದಿ ಸರಕಾರ ಮತ್ತು ಬಿಜೆಪಿ ಓಡಿಹೋಗುವಂತಿಲ್ಲ ಎಂದು ಹೇಳಿದ್ದಾರೆ.೧೪೦ ಕೋಟಿ ಜನರ ನಾಯಕ ಸಂಸತ್ತಿನ ಹೊರಗೆ ಹೇಳಿಕೆ ನೀಡಿದರೆ ಜನಪ್ರತಿನಿಧಿಗಳು ಕುಳಿತುಕೊಳ್ಳುವ ಸಂಸತ್ತಿನಲ್ಲಿ ಯಾಕೆ ಹೇಳಿಕೆ ನೀಡಬಾರದು ಎಂದು ಪ್ರಶ್ನಿಸಿದ್ದಾರೆ.