ಮಣಿಪುರ ಹಿಂಸಾಚಾರ ಮೋದಿ ಮೌನಕ್ಕೆ ರಾಹುಲ್ ಕಿಡಿ

ನವದೆಹಲಿ,ಜು.೧೭- ಈಶಾನ್ಯ ರಾಜ್ಯಗಳಲ್ಲಿ ಒಂದಾದ ಮಣಿಪುರ ಹಿಂಸಾಚಾರದವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೌನವನ್ನು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಹಿಂಸಾಚಾರದಲ್ಲಿ ನಲುಗಿರುವ ಮಣಿಪುರದ ಜನರ ಬಗ್ಗೆ ಮಾತನಾಡುವ ಗೋಜಿಗೆ ಹೋಗದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಾನ್ಸ್‌ನ ಬಾಸ್ಟಿಲ್ ಡೇ ಪರೇಡ್‌ಗೆ ಟಿಕೆಟ್ ಸಿಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
“ಮಣಿಪುರ ಹೊತ್ತಿ ಉರಿಯುತ್ತಿದೆ. ಸಂಸತ್ತು ಭಾರತದ ಆಂತರಿಕ ವಿಷಯ ಚರ್ಚಿಸುತ್ತದೆ. ಪ್ರಧಾನಿ ಒಂದೂ ಮಾತನಾಡಿಲ್ಲ. ಆದರೆ ಪ್ರಧಾನಿ ಅವರಿಗೆ ರಫೇಲ್ ಅವರಿಗೆ ಬಾಸ್ಟಿಲ್ ಡೇ ಪರೇಡ್‌ಗೆ ಟಿಕೆಟ್ ಸಿಗುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.
ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರ ಅಧಿಕೃತ ಆಹ್ವಾನದ ಮೇರೆಗೆ, ಪ್ರಧಾನಿ ಮೋದಿ ಅವರು ಜುಲೈ ೧೩ ರಂದು ತಮ್ಮ ಎರಡು ದಿನಗಳ ಫ್ರಾನ್ಸ್ ಪ್ರವಾಸ ಕೈಗೊಂಡು ವಾಪಸ್ಸಾಗಿದ್ದಾರೆ
ಜೂನ್ ೨೯ ರಂದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಿಂಸಾಚಾರ ಪೀಡಿತ ಮಣಿಪುರಕ್ಕೆ ಭೇಟಿ ನೀಡಿ ಅಲ್ಲಿ ಶಾಂತಿ ಕಾಪಾಡುವ ಅಗತ್ಯವಿದೆ ಎಂದು ಹೇಳಿದ್ದರು
“ಮಣಿಪುರಕ್ಕೆ ಚೇತರಿಸಿಕೊಳ್ಳಲು ಶಾಂತಿ ಬೇಕು.೨ ದಿನಗಳ ರಾಜ್ಯ ಭೇಟಿಯ ಸಮಯದಲ್ಲಿ, ಸಹೋದರ ಸಹೋದರಿಯರನ್ನು ನೋವು ನೋಡಿ ಹೃದಯ ಒಡದಿದೆ. ಶಾಂತಿಯೇ ಮುಂದಿನ ದಾರಿ, ಮತ್ತು ನಾವೆಲ್ಲರೂ ಅದಕ್ಕಾಗಿ ಶ್ರಮಿಸಬೇಕು” ಎಂದು ಹೇಳಿದ್ದಾರೆ.
ಮೇ ತಿಂಗಳ ಆರಂಭದಲ್ಲಿ ಮೇಥೇಯಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕುರಿತು ರಾಜ್ಯ ಸರ್ಕಾರವನ್ನು ಪರಿಗಣಿಸುವಂತೆ ಕೋರಿ ಹೈಕೋರ್ಟ್‌ನ ಆದೇಶದ ವಿರುದ್ಧ ಕುಕಿ ಮತ್ತು ನಾಗಾ ಸಮುದಾಯಗಳು ನಡೆಸಿದ ಪ್ರತಿಭಟನೆಯ ನಂತರ ರಾಜ್ಯ ಹಿಂಸಾಚಾರಕ್ಕೆ ಸಾಕ್ಷಿಯಾಗಿತ್ತು.