ಮಣಿಪುರ ಹಿಂಸಾಚಾರ ಮುರ್ಮುಗೆ ಇಂಡಿಯಾ ದೂರು

ನವದೆಹಲಿ,ಆ.೨-ಮಣಿಪುರ ಹಿಂಸಾಚಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ವಿರೋದ ಪಕ್ಷದ ಮೈತ್ರಿಕೂಟ “ಇಂಡಿಯಾ” ಸದಸ್ಯರು, ಮಣಿಪುರ ಘರ್ಷಣೆಯ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಹೇಳಿಕೆ ನೀಡಬೇಕು ಎನ್ನುವ ವಿಷಯವನ್ನು ರಾಷ್ಟ್ರಪತಿ ಅಂಗಳಕ್ಕೆ ತೆಗೆದುಕೊಂಡು ಹೋಗಿದ್ದಾರೆ.
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಣಿಪುರದ ಹಿಂಸಾಚಾರ ಪ್ರಕರಣ ಮತ್ತು ಕಳೆದ ಎರಡು ವಾರಗಳಿಂದ ಸಂಸತ್ತಿನಲ್ಲಿ ನಡೆಯುತ್ತಿರುವ ವಿಷಯವನ್ನು ರಾಷ್ಟ್ರಪತಿ ಗಮನಕ್ಕೆ ತಂದಿದ್ಧಾರೆ.
ರಾಷ್ಟ್ರಪತಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ‘ಪ್ರಧಾನಿ ಮೋದಿ ಅವರು ಮಣಿಪುರಕ್ಕೆ ಭೇಟಿ ನೀಡಬೇಕು, ರಾಜ್ಯದಲ್ಲಿ ಶಾಂತಿ ಸ್ಥಾಪನೆಗೆ ಕ್ರಮಕೈಗೊಳ್ಳಬೇಕು. ಈ ವಿಷಯದಲ್ಲಿ ಮದ್ಯ ಪ್ರವೇಶಿಸುವಂತೆ ರಾಷ್ಟ್ರಪತಿಯವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ತಿಳಿಸಿದ್ದಾರೆ.
ಮಣಿಪುರ ಹಿಂಸಾಚಾರ ಪ್ರಕರಣ ಕುರಿತು ಸಂಸತ್ತಿನಲ್ಲಿ ಪ್ರಧಾನಿ ಮೋದಿ ಅವರ ಹೇಳಿಕೆಗೆ ತಮ್ಮ ಬೇಡಿಕೆಯ ಕುರಿತು ಪ್ರತಿಪಕ್ಷಗಳ ನಿಯೋಗ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಮಾಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಇದರ ಜೊತೆಗೆ ಹರ್ಯಾಣದಲ್ಲಿ ನಡೆಯುತ್ತಿರುವ ಹಿಂಸಾಚಾರದ ವಿಷಯವನ್ನು ಪ್ರತಿಪಕ್ಷಗಳ ನಿಯೋಗ ಅಧ್ಯಕ್ಷ ಮುರ್ಮು ಅವರ ಬಳಿಯೂ ಪ್ರಸ್ತಾಪಿಸಿದೆ ಎಂದು ಅವರು ಹೇಳಿದ್ದಾರೆ.

ಇಬ್ಬರ ನಾಮಕರಣಕ್ಕೆ ಆಗ್ರಹ
ಇಬ್ಬರು ಮಣಿಪುರಿ ಮಹಿಳೆಯರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ “ಇಂಡಿಯಾ” ಮೈತ್ರಿಕೂಟದ ಸದಸ್ಯರು ಒತ್ತಾಯ ಮಾಡಿದ್ದೇವೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ವಿವಿಧ ಸಮುದಾಯಗಳ ಇಬ್ಬರು ಮಣಿಪುರಿ ಮಹಿಳೆಯರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡುವ ಮೂಲಕ ಈಶಾನ್ಯ ರಾಜ್ಯದಲ್ಲಿ ತಲೆ ದೋರಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು ಎಂದು ಮನವಿ ಮಾಡಲಾಗಿದೆ ಎಂದಿದ್ಧಾರೆ.