ಮಣಿಪುರ ಹಿಂಸಾಚಾರ: ನಿಷ್ಪಕ್ಷಪಾತ ತನಿಖೆ ಕೈಗೊಂಡು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ಆಗ್ರಹಿಸಿ ಪ್ರತಿಭಟನೆ

ಕಲಬುರಗಿ:ಜು.24: ಮಣಿಪುರ ಹಿಂಸಾಚಾರದ ಕುರಿತು ನಿಷ್ಪಕ್ಷಪಾತ ತನಿಖೆಯನ್ನು ಕೈಗೊಂಡು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಕರ್ನಾಟಕ ಪ್ರಾಂತ ಕೃಷಿ ಕೃಷಿ ಕೂಲಿಕಾರರ ಸಂಘದ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಪ್ರತಿಭಟನೆಕಾರರು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ, ಮಣಿಪುರದಲ್ಲಿ ಸೌಹಾರ್ದ ವಾತಾವರಣ ನಿರ್ಮಾಣ ಮಾಡುವಂತೆ ಹಾಗೂ ಮಣಿಪುರ ರಾಜ್ಯದ ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸಿ ಇಂಡಿಯಾ ಹೊಸ ಒಕ್ಕೂಟದ ನೇತೃತ್ವದಲ್ಲಿ ಜುಲೈ 25ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮಣಿಪುರ ರಾಜ್ಯದಲ್ಲಿ ಕಳೆದ ಮೂರು ತಿಂಗಳಿನಿಂದಲೂ ಜನಾಂಗೀಯ ಘರ್ಷಣೆ ನಡೆಯುತ್ತಿದೆ. ಇಡೀ ರಾಜ್ಯದಲ್ಲಿ ಕುಕಿ ಮತ್ತು ಜೋಯಿ ಬುಡಕಟ್ಟು ಸಮುದಾಯಗಳೂ ಸೇರಿದಂತೆ ವಿವಿಧ ಜನರನ್ನು ಗುರಿಯಾಗಿರಿಸಿಕೊಂಡು ನಡೆಸುತ್ತಿರುವ ಗಲಭೆಗಳನ್ನು ನಿಯಂತ್ರಿಸಬೇಕಾದ ರಾಜ್ಯ ಸರ್ಕಾರ ಅದರಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಅವರು ಆರೋಪಿಸಿದರು.
ಒಂದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವಿಫಲವಾದಾಗ ಮಧ್ಯಪ್ರವೇಶ ಮಾಡಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಾದ ಕೇಂದ್ರ ಸರ್ಕಾರ ಮೂಕ ಪ್ರೇಕ್ಷಕವಾಗಿ ವರ್ತಿಸುತ್ತಿದೆ ಎಂದು ಟೀಕಿಸಿದ ಅವರು, ಇದನ್ನೆಲ್ಲ ಅವಲೋಕಿಸಿದಾಗ ಗಲಭೆಗಳು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಬಿಜೆಪಿಯು ಹಲವು ವರ್ಷಗಳಿಂದ ಆ ಜನರ ನಡುವೆ ಬಿತ್ತಿರುವ ದ್ವೇಷ ಭಾವನೆಗಳ ಪರಿಣಾಮವಾಗಿಯೇ ಸಂಘರ್ಷ ನಡೆಯುತ್ತಿದ್ದು, ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವೇ ಕುಮ್ಮಕ್ಕು ಕೊಡುತ್ತಿದೆ. ಕೇಂದ್ರ ಗೃಹ ಸಚಿವರು ಮಣಿಪುರಕ್ಕೆ ಹೋಗಿ ಬಂದರೂ ನಿಯಂತ್ರಣಕ್ಕೆ ಬಾರದೇ ಇರುವುದನ್ನು ಗಮನಿಸಿದರೆ ಇದು 2002ರಲ್ಲಿ ನಡೆದ ಗುಜರಾತ್ ಮಾದರಿಯ ಮುಂದುವರೆದ ಭಾಗದಂತೆ ಭಾಸವಾಗುತ್ತದೆ. ಮನುವಾದಿಗಳು ಇಡೀ ದೇಶಕ್ಕೆ 2023ರ ಮಣಿಪುರ ಮಾದರಿ ಸೃಷ್ಟಿ ಮಾಡಬೇಕೆನ್ನುವ ವ್ಯವಸ್ಥಿತ ಹುನ್ನಾರ ಎಂದು ಅವರು ದೂರಿದರು.
ಈ ಎಲ್ಲದರ ಪರಿಣಾಮವೇ ಇಡೀ ದೇಶವೇ ತಲೆ ತಗ್ಗಿಸುವಂತಹ ಮಹಿಳೆಯರ ಬೆತ್ತಲೆ ಮೆರವಣಿಗೆ, ಸಾಮೂಹಿಕ ಅತ್ಯಾಚಾರ, ಸಮುದಾಯಗಳ ಮಾರಣ ಹೋಮದಂತಹ ಕಾಂಡಗಳು ಹೊರಬರುತ್ತಿವೆ. ದೇಶ ರಕ್ಷಣೆ ಹೊತ್ತ ಸೈನಿಕರ ಪತ್ನಿಯರಿಗೂ ಕೂಡ ರಕ್ಷಣೆ ಇಲ್ಲದಂತಾಗಿದೆ. ಇಂತಹ ಕೃತ್ಯಗಳನ್ನು ಸಹಿಸುವುದಿಲ್ಲ. ಕೂಡಲೇ ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು.
ಮಣಿಪುರದಲ್ಲಿನ ಗಲಭೆಗಳನ್ನು ನಿಲ್ಲಿಸಿ ಶಾಂತಿ ಸ್ಥಾಪಿಸಬೇಕು. ದೌರ್ಜನ್ಯಕ್ಕೆ ಒಳಗಾದ ಕುಕಿ ಮತ್ತು ಜೋಮಿ ಮತ್ತೆಲ್ಲ ಜನಾಂಗಕ್ಕೆ ನ್ಯಾಯ ದೊರಕಿಸಿಕೊಡುವಂತೆ, ದೌರ್ಜನ್ಯಗಳನ್ನು ಎಸಗಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳುವಂತೆ, ಮಣಿಪುರ ಮುಖ್ಯಮಂತ್ರಿ ರಾಜೀನಾಮೆ ಕೊಡುವಂತೆ, ಅಲ್ಲಿನ ಸರ್ಕಾರವನ್ನು ಅಮಾನತ್ತಿಗೆ ಒಳಪಡಿಸುವಂತೆ, ಹಿಂಸಾಚಾರದ ಕುರಿತು ನ್ಯಾಯಾಂಗ ತನಿಖೆಗೆ ಒಳಪಡಿಸುವಂತೆ, ಹೋರಾಟಗಾರರ ಮೇಲೆ ಹಾಕಲಾದ ಸುಳ್ಳು ದೇಶದ್ರೋಹದ ಪ್ರಕರಣಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಅವರು ಆಗ್ರಹಿಸಿದರು.
ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭೀಮಶೆಟ್ಟಿ ಯಂಪಳ್ಳಿ, ಸಾಯಬಣ್ಣ ಗುಡುಬಾ, ಮಲ್ಲಮ್ಮ ಮಗಿ, ಸುಭಾಷ್ ಹೊಸಮನಿ, ರಾಯಪ್ಪ ಹುರಮುಂಜಿ, ದಿಲೀಪ್ ಕುಮಾರ್ ನಾಗೂರೆ, ಕಾಶಿನಾಥ್ ಬಂಡಿ, ಜಾವೇದ್ ಹುಸೇನ್, ನಾಗಯ್ಯಸ್ವಾಮಿ, ಮೇಘರಾಜ್ ಕಠಾರೆ, ಸಿದ್ದು ಹರವಾಳ್ ಮುಂತಾದವರು ಪಾಲ್ಗೊಂಡಿದ್ದರು.