ಮಣಿಪುರ ಹಿಂಸಾಚಾರ ಖಂಡಿಸಿ ರಾಜ್ಯಪಾಲರಿಗೆ ದಸಂಸ ದೂರು

ಬೆಂಗಳೂರು, ಆ. ೨- ಮಣಿಪುರ ರಾಜ್ಯದಲ್ಲಿ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಮತ್ತು ಕೊಲೆ ಖಂಡಿಸಿ, ಮಣಿಪುರ ಶಾಂತಿಗಾಗಿ ಆಗ್ರಹಿಸಿ ಆರ್.ಪಿ.ಐ. (ಬಿ) ಹಾಗೂ ದ.ಸಂ.ಸ. ಬೆಂಗಳೂರು ಜಿಲ್ಲಾ ಘಟಕಗಳಿಂದ ಇಂದು ರಾಜಭವನ ಚಲೋ ನಡೆಸಿತು. ನಂತರ ರಾಜ್ಯಪಾಲರ ಮೂಲಕ ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ ಬುಡಕಟ್ಟು ಆದಿವಾಸಿ ಜನಾಂಗಗಳ ಮಧ್ಯೆ ಇದ್ದ ಅಸಮಾನ ಹಾಗೂ ಅಸಹನೆಯನ್ನು ರಾಜಕೀಯ ಉದ್ದೇಶದಿಂದ ಪ್ರಚೋದಿಸಿ ದ್ವೇಷದ ಬೆಂಕಿ ಹತ್ತಿಸಲಾಗಿದೆ. ಬುಡಕಟ್ಟು ಜನಾಂಗಗಳ ದ್ವೇಷದ ದಳ್ಳುರಿ ಮಣಿಪುರವನ್ನೇ ವ್ಯಾಪಿಸಿದೆ ಈ ಗಲಭೆಯಲ್ಲಿ ೧೬೦ ಜನರು ಭೀಕರ ಸಾವಿಗೀಡಾದರೆ ಸಹಸ್ರಾರು ಜನ ಗಂಭೀರ ಗಾಯಗೊಂಡಿದ್ದಾರೆ. ನೂರಾರು ಮನೆ ಆಸ್ತಿ-ಪಾಸ್ತಿಗಳಿಗೆ ಬೆಂಕಿ ಹಾಕಿ ಸುಟ್ಟು ನಾಶಗೊಳಿಸಿದ್ದಾರೆ. ೬೦೦ಕ್ಕೆ ಹೆಚ್ಚು ಕೇಸುಗಳು ದಾಖಲಾಗಿವೆ ಎಂದು ಆರ್‌ಪಿಐ (ಬಿ) ಅಧ್ಯಕ್ಷ ಎನ್. ಮೂರ್ತಿ ಆರೋಪಿಸಿದರು.
ಗಲಭೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಆರ್.ಎಸ್.ಎಸ್. ಸಂಘ ಪರಿವಾರದ ಕಾರ್ಯಕರ್ತರು ಭಾಗಿಯಾಗಿದ್ದಾರೆ. ಮಣಿಪುರದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದು ಮೈತೇಯಿ ಸಮಾಜದ ಪರವಾಗಿ ನಿಂತು ಕುಕಿ ಬುಡಕಟ್ಟು ಜನಾಂಗದ ವಿರುದ್ಧ ಸರ್ಕಾರಿ ಯಂತ್ರ ಬಳಸಿ ತಾರತಮ್ಯ ಹಾಗೂ ಕಾನೂನುಬಾಹಿರ ಕೃತ್ಯವೆಸಗಲಾಗಿದೆ ಎಂದು ಅವರು ಟೀಕಿಸಿದರು.
ಕುಕಿ ಸಮಾಜದ ವಿರುದ್ಧ ಕೆಂಡಕಾರಿರುವ ಕೋಮುವಾದಿ ಬಿಜೆಪಿಯು ಬುಡಕಟ್ಟು ಜನಾಂಗಗಳ ಮೇಲೆ ಹಿಡಿತ ಸಾಧಿಸಿ ಓಟ್ ಬ್ಯಾಂಕ್ ಗಟ್ಟಿಗೊಳಿಸಿಕೊಳ್ಳಲು ಇಂತಹ ಅಸಹ್ಯ ಹಾಗೂ ಅನಾಗರಿಕ, ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ. .
ಮಹಿಳೆಯರನ್ನು ಬೆತ್ತಲೆಗೊಳಿಸಿ ಮಹಿಳೆ ಮತ್ತು ಮಕ್ಕಳ ಹಕ್ಕು ಮತ್ತು ರಕ್ಷಣೆ ಧ್ವಂಸ ಮಾಡಿ ಅಪಮಾನಿಸಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಿ, ಕೂಡಲೇ ಸಿ.ಬಿ.ಐ. ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಮಣಿಪುರದ ಶಾಂತಿಗಾಗಿ ಎಲ್ಲಾ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಮಣಿಪುರದ ಶಾಂತಿಗೆ ಬಿಜೆಪಿ ಕೇಂದ್ರ ಸರ್ಕಾರ ಮುಂದಾಗದಿದ್ದಲ್ಲಿ ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಹೀನಾಯವಾಗಿ ಸೋಲಿಸಲು ರಾಷ್ಟ್ರಾದ್ಯಂತ ಆರ್.ಪಿ.ಐ.(ಬಿ) ಜಾಗೃತಿ ಆಂದೋಲನ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಹಲವಾರು ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.