ಮಣಿಪುರ: ಹಿಂಸಾಚಾರಕ್ಕೆ ಮೂವರು ಬಲಿ

ಇಂಪಾಲ್,ಆ.೫:ಜನಾಂಗೀಯ ಹಿಂಸಾಚಾರದಿಂದ ಮಣಿಪುರ ಹೊತ್ತಿ ಉರಿಯುತ್ತಿದೆ. ಬಿಷ್ಣುಪುರ್ ಜಿಲ್ಲೆಯಲ್ಲಿ ಇಂದು ಮುಂಜಾನೆ ನಡೆದ ಹಿಂಸಾಚಾರದಲ್ಲಿ ಮೂವರು ಮೃತಪಟ್ಟಿದ್ದಾರೆ.ಈ ದಾಳಿಯ ಹಿಂದೆ ಕುಕಿ ಸಮುದಾಯದ ಕೈವಾಡವಿದೆ ಎಂದು ಭದ್ರತಾ ಪಡೆಗಳು ಶಂಕೆ ವ್ಯಕ್ತಪಡಿಸಿವೆ. ಈ ಹಿಂಸಾಚಾರಕ್ಕೆ ಬಲಿಯಾದವರು ಮೈತೇಹಿ ಸಮುದಾಯಕ್ಕೆ ಸೇರಿದವರು ಎಂದು ಹೇಳಲಾಗಿದೆ.ಕುಕಿ ಶಸ್ತ್ರ ಸಜ್ಜಿತ ದುಷ್ಕರ್ಮಿಗಳು ಹಾಗೂ ಭದ್ರತಾ ಪಡೆಗಳ ನಡುವೆ ತೀವ್ರ ಗುಂಡಿನ ದಾಳಿ ನಡೆದಿದೆ.ಮೂಲಗಳ ಪ್ರಕಾರ ಮೂವರು ಮಾರಕಾಸ್ತ್ರಗಳಿಂದ ಇರಿದು ಕೊಲೆಮಾಡಲಾಗಿದೆ ಎಂದು ಹೇಳಲಾಗಿದೆ.ಆದರೆ, ಈ ಬಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಮೇ ೩ ರಂದು ಆರಂಭವಾದ ಹಿಂಸಾಚಾರದಲ್ಲಿ ಇದುವರೆಗೂ ೧೫೦ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ. ಕುಕಿ ಮತ್ತು ಮೈತೇಹಿ ಸಮುದಾಯದ ನಡುವೆ ಘರ್ಷಣೆ ಮುಂದುವರೆದಿದ.ಈ ಮಧ್ಯೆ ಆ. ೨೧ ರಂದು ಮಣಿಪುರ ಹಿಂಸಾಚಾರ ಹಾಗೂ ಉದ್ಭವಿಸಿರುವ ಪರಿಸ್ಥಿತಿ ಕುರಿತು ಚರ್ಚೆ ನಡೆಸಲು ವಿಶೇಷ ಅಧಿವೇಶನ ಕರೆಯಲು ಮಣಿಪುರ ಸಂಪುಟ ಸಭೆ ಶಿಫಾರಸು ಮಾಡಿದೆ.ಇದೇ ವಿಚಾರವನ್ನು ಮುಂದಿಟ್ಟುಕೊಂಡು ಸಂಸತ್‌ನ ಉಭಯ ಸದನಗಳಲ್ಲೂ ಇಂಢಿಯಾ ಮೈತ್ರಿಕೂಟ ಕಲಾಪಕ್ಕೆ ಅಡ್ಡಿಪಡಿಸಿದೆ. ಮಣಿಪುರದ ಬಗ್ಗೆ ಪ್ರಧಾನಿ ನರೇಂದ್ರಮೋದಿ ಅವರು ಹೇಳಿಕೆ ನೀಡಬೇಕೆಂದು ಪಟ್ಟು ಹಿಡಿದು ಅವಿಶ್ವಾಸ ಗೊತ್ತುವಳಿ ಮಂಡಿಸಿವೆ. ಈ ಬಗ್ಗೆ ಇನ್ನೂ ಚರ್ಚೆ ಆರಂಭವಾಗಿಲ್ಲ.