ಮಣಿಪುರ ಹಿಂಸಾಚಾರಕ್ಕೆ ನಾಲ್ವರ ಬಲಿ

ಇಂಫಾಲ, ಜು.೮- ಮಣಿಪುರದಲ್ಲಿ ಹಿಂಸಾಚಾರ ಮುಂದುವರಿದಿದ್ದು, ತಡ ರಾತ್ರಿ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಪೊಲೀಸ್ ಯುವಕ ಸೇರಿದಂತೆ ನಾಲ್ವರು ಸಾವನ್ನಪ್ಪಿದ ಘಟನೆ ನಡೆದಿದೆ.
ಶುಕ್ರವಾರ ರಾತ್ರಿ ದಾಳಿಗೆ ಮುಂದಾದ ಗುಂಪೊಂದು ಕಾಂಗ್ವೈ, ಸಾಂಗ್ಡೊ ಮತ್ತು ಅವಾಂಗ್ ಲೆಖೈ ಗ್ರಾಮಗಳ ಮನೆಗಳಿಗೆ ಬೆಂಕಿ ಹಚ್ಚಲು ಮುಂದಾಯಿತು. ಗುಂಪನ್ನು ಹಿಮ್ಮೆಟ್ಟಲು ಇನ್ನೊಂದು ಸಮುದಾಯದ ಜನರು ಪ್ರಯತ್ನ ನಡೆಸಿದರು. ಅಲ್ಲದೇ, ಬೆಂಕಿ ಹಚ್ಚದಂತೆ ಮನವಿ ಮಾಡಿದರು.
ಇದನ್ನು ಲೆಕ್ಕಿಸದೇ ದಾಳಿಗೆ ಮುಂದಾದಾಗ, ಭದ್ರತಾ ಪಡೆಗಳು ಸೇರಿ ಜನರು ಗುಂಪಿನ ಮೇಲೆ ದಾಳಿ ನಡೆಸಿದರು ಎನ್ನಲಾಗಿದೆ.
ಪರಸ್ಪರ ಗುಂಡಿನ ಚಕಮಕಿ ನಡೆದಿದೆ.ಗುಂಡಿನ ಚಕಮಕಿಯಲ್ಲಿ ಪೊಲೀಸ್ ಕಮಾಂಡೋ ತೀವ್ರವಾಗಿ ಗಾಯಗೊಂಡು ಮೃತಪಟ್ಟರೆ, ಇನ್ನೂ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ.
ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸ್ ಭದ್ರತೆ ನೀಡಿದಾಗ್ಯೂ ಬಿಷ್ಣುಪುರ್ ಜಿಲ್ಲೆಯ ಕಾಂಗ್ವೈ ಪ್ರದೇಶದಲ್ಲಿ ಕಾದಾಟ ನಡೆದಿದೆ.
ಮೇ ೩ ರಂದು ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ ಇಲ್ಲಿಯವರೆಗೂ ೧೨೦ ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
೩,೦೦೦ ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.