ಮಣಿಪುರ ಸರ್ಕಾರಕ್ಕೆ ಎನ್‌ಎಚ್‌ಆರ್‌ಸಿ ನೋಟಿಸ್

ಇಂಫಾಲ್,ಡಿ.೧೦- ಗುಂಡಿನ ದಾಳಿಯಲ್ಲಿ ೧೩ ಜನರ ಸಾವಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಮಣಿಪುರದ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಗೆ ನೋಟಿಸ್ ಜಾರಿ ಮಾಡಿದೆ.
ಘಟನೆಯ ಕುರಿತು ಎರಡು ವಾರಗಳಲ್ಲಿ ವಿವರವಾದ ವರದಿ ನೀಡುವಂತೆ ಮಾನವ ಹಕ್ಕುಗಳ ಆಯೋಗ ನೋಟಿಸ್ ನೀಡಿದೆ. ವರದಿಯು ಪೊಲೀಸರು ದಾಖಲಿಸಿರುವ ಎಫ್‌ಐಆರ್‌ಗಳ ಸ್ಥಿತಿ ಮತ್ತು ಅಂತಹ ಹಿಂಸಾಚಾರದ ಘಟನೆಗಳನ್ನು ತಡೆಯಲು ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳನ್ನು ಒಳಗೊಂಡಿರಬೇಕು ಎಂದು ತಾಕೀತು ಮಾಡಿದೆ.
ಘಟನೆ ವಿವರ:
ಮಣಿಪುರದ ತೆಂಗ್ನೌಪಾಲ್ ಜಿಲ್ಲೆಯ ಸೈಬೋಲ್ ಬಳಿಯ ಲಿಥಾವೊ ಗ್ರಾಮದಲ್ಲಿ ಸೋಮವಾರ ಎರಡು ಗುಂಪುಗಳ ನಡುವಿನ ಗುಂಡಿನ ದಾಳಿಯಲ್ಲಿ ೧೩ ಜನರು ಸಾವನ್ನಪ್ಪಿದ್ದಾರೆ ಎಂಬ ಮಾಧ್ಯಮ ವರದಿಗಳನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಸ್ವಯಂಪ್ರೇರಿತವಾಗಿ ಸ್ವೀಕರಿಸಿದೆ. ಈ ವರ್ಷದ ಮೇ ತಿಂಗಳಲ್ಲಿ ಮಣಿಪುರದಲ್ಲಿ ಉದ್ವಿಗ್ನತೆಯ ನಂತರ ೧೩ ಜನರು ಸಾವನ್ನಪ್ಪಿರುವುದು ಆತಂಕಕಾರಿ ಎಂದು ಮಾನವ ಹಕ್ಕುಗಳ ಆಯೋಗ ಹೇಳಿದೆ.