ಮಣಿಪುರ ಮುಖ್ಯಮಂತ್ರಿ ವಜಾಕ್ಕೆ ಆಗ್ರಹಿಸಿ ಬಿಎಸ್‍ಪಿ ಪ್ರತಿಭಟನೆ

ಕಲಬುರಗಿ,ಜು.26: ಮಣಿಪುರದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿದ ಘಟನೆ ಖಂಡಿಸಿ ಹಾಗೂ ಮುಖ್ಯಮಂತ್ರಿ ಬೀರೇನಸಿಂಗ್ ಅವರ ವಜಾಕ್ಕೆ ಒತ್ತಾಯಿಸಿ ಬುಧುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಬಹುಜನ ಸಮಾಜ ಪಕ್ಷ ಜಿಲ್ಲಾ ಸಮಿತಿ ಕಾರ್ಯಕರ್ತರು ಪ್ರತಿಭಟನಾ ಪ್ರದರ್ಶನ ಮಾಡಿದರು.

ಪ್ರತಿಭಟನೆಕಾರರು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ, ಮಣಿಪುರ ಸರ್ಕಾರವನ್ನು ಕೂಡಲೇ ವಜಾಗೊಳಿಸುವಂತೆ, ಅಲ್ಲಿಯ ಕುಕಿ ಮತ್ತು ನಾಗ ಬುಡಕಟ್ಟು ಸಮುದಾಯದವರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ, ಕುಕಿ ಸಮುದಾಯದ ಮಹಿಳೆಯರಿಗೆ ಬೆತ್ತಲೆ ಮೆರವಣಿಗೆ ಮಾಡಿ ಸಾಮೂಹಿಕ ಅತ್ಯಾಚಾರ ಎಸಗಿದ ಕ್ರೂರಿಗಳನ್ನು ಬಂಧಿಸಿ ಅವರ ಮೇಲೆ ಉಗ್ರ ಕ್ರಮ ಜರುಗಿಸುವಂತೆ, ಮಣಿಪುರದಲ್ಲಿ ಶಾಂತಿ, ನೆಮ್ಮದಿ ಇರುವ ಕಾನೂನಾತ್ಮಕ ಕ್ರಮಗಳನ್ನು ಕೂಡಲೇ ಕೈಗೊಳ್ಳುವಂತೆ ಒತ್ತಾಯಿಸಿದರು.
ಮೈತೇಯ ಸಮುದಾಯಕ್ಕೆ ಗುಡ್ಡಗಾಡು ಬುಡಕಟ್ಟು ಸಮುದಾಯದ ಸ್ಥಾನಮಾನ ಕೈಗೊಳ್ಳಬೇಕು ಎಂದು ಮಣಿಪುರ ಉಚ್ಛ ನ್ಯಾಯಾಲಯದ ಆದೇಶವೇ ಸಂಘರ್ಷಕ್ಕೆ ಮೂಲ ಕಾರಣವಾಗಿದೆ. ಮಣಿಪುರ ಉಚ್ಛ ನ್ಯಾಯಾಲಯದ ಆದೇಶಕ್ಕೆ ಸುಪ್ರಿಂಕೋರ್ಟ್ ತಡೆಯಾಜ್ಞೆ ನೀಡಿದರೂ ಕುಕಿ ಸಮುದಾಯ ತನ್ನ ಹಕ್ಕುಗಳಿಗೆ ಧಕ್ಕೆ ಬರಬಹುದು ಎಂಬ ಆತಂಕದಿಂದ ಸರ್ಕಾರದ ವಿರುದ್ಧ ಹೋರಾಟ ಪ್ರಾರಂಭಿಸಿದರು. ಇದರಿಂದ ಎರಡೂ ಸಮುದಾಯದ ಮಧ್ಯೆ ದೊಡ್ಡ ಪ್ರಮಾಣದ ಸಂಘರ್ಷ ಉಂಟಾಯಿತು. ಅಲ್ಲದೇ ಇಡೀ ದೇಶ ತಲೆ ತಗ್ಗಿಸುವ ಮನುಕುಲ ಕಳಕಂದಿಂದ ನಾಚಿಕೆಪಡುವ ಅಮಾನವೀಯ ಘಟನೆ ನಡೆಯಿತು ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಕುಕಿ ಸಮುದಾಯದ ಮಹಿಳೆಯರಿಗೆ ಬೆತ್ತಲೆ ಮೆರವಣಿಗೆ ಮಾಡಿ ಸಾಮೂಹಿಕ ಅತ್ಯಾಚಾರ ಎಸಗಲಾಯಿತು. ತನ್ನ ಸೋದರಿಗೆ ಕಾಪಾಡಲು ಬಂದ 19 ವರ್ಷದ ಯುವಕನಿಗೆ ಬರ್ಬರವಾಗಿ ಕೊಲೆ ಮಾಡಲಾಯಿತು. ಮೇ 3ರಂದು ಆರಂಭವಾದ ಗಲಭೆ ಹಾಗೂ ಹಿಂಸಾಚಾರ 80 ದಿನಗಳು ಕಳೆದರೂ ಇನ್ನೂ ನಿಂತಿಲ್ಲ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಚುನಾವಣಾ ರ್ಯಾಲಿಗಳಲ್ಲಿ ಪಾಲ್ಗೊಳ್ಳುವುದು, ಹೊರ ದೇಶದ ಮಹಿಳೆಗೆ ವಜ್ರದುಂಗುರ ಉಡುಗೊರೆ ಕೊಟ್ಟು ಸಂತೋಷಪಡುತ್ತಿದ್ದಾರೆ. ಮಣಿಪುರದ ಕುರಿತು ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಹಿಂದೂ ರಾಷ್ಟ್ರದ ಲಾಂಛನಗಳನ್ನು ಹೇರುವ ಕ್ರಿಯೆಯಲ್ಲಿ ತೊಡಗಿಸಿಕೊಂಡಿದೆ. ಆರ್ಯ ತತ್ವ, ವೈದಿಕಶಾಹಿ ಮತ್ತು ಬ್ರಾಹ್ಮಣವಾದಿ ರೂಪದಲ್ಲಿ ಹಿಂದೂತ್ವದ ಸಿದ್ದಾಂತ ಹೇರಲು ಹೊರಟಿದೆ ಎಂದು ಆರೋಪಿಸಿದ ಅವರು, ಕೂಡಲೇ ಮಣಿಪುರ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಬಿಎಸ್‍ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಲ್.ಆರ್. ಬೋಸ್ಲೆ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಎಸ್‍ಪಿ ಜಿಲ್ಲಾಧ್ಯಕ್ಷ ಸುನೀಲ್ ಇಂಗನಕಲ್ಲ, ಜಿಲ್ಲಾ ಸಂಯೋಜಕ ಮೈಲಾರಿ ಶೆಳ್ಳಗಿ, ಯಲ್ಲಪ್ಪ ಛಲವಾದಿ, ಶರಣು ಹಂಗರಗಿ, ಶಿವಕುಮಾರ್ ಡಿ. ಸೇರಿದಂತೆ ಹಲವರು ಪಾಲ್ಗೊಂಡಿದ್ದರು.