ಮಣಿಪುರ ಮಹಿಳೆ ಸೇರಿ ಇಬ್ಬರ ಸೆರೆ; ಹೆರಾಯಿನ್ ವಶ

ಬೆಂಗಳೂರು,ಸೆ.೧೫- ಮಾದಕ ವಸ್ತು ಮಾರಾಟ ಸರಬರಾಜು ವಿರುದ್ಧ ಸಮರ ಸಾರಿರುವ ಪೂರ್ವ ವಿಭಾಗದ ಪೊಲೀಸರು ಹೇರ್ ಕಟ್ ಮತ್ತು ಸ್ಪಾದಲ್ಲಿ ಕೆಲಸ ಮಾಡುತ್ತ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಮಣಿಪುರ ಮಹಿಳೆ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತ ಮಣಿಪುರ ಮಹಿಳೆ ಸೇರಿ ಇಬ್ಬರಿಂದ ೧.೫ ಲಕ್ಷ ಮೌಲ್ಯದ ಹೆರಾಯಿನ್‌ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಡಾ. ಶರಣಪ್ಪ ತಿಳಿಸಿದ್ದಾರೆ.
ಬಂಧಿತ ಮಹಿಳೆಯು ಕಮ್ಮನಹಳ್ಳಿ ಮುಖ್ಯರಸ್ತೆಯ ಹೇರ್‌ಕಟ್ ಮತ್ತು ಸ್ಪಾದಲ್ಲಿ ಕೆಲಸ ಮಾಡಿಕೊಂಡಿದ್ದಳು. ಅಕ್ರಮ ಹಣ ಸಂಪಾದನೆ ಮಾಡುವ ಸಲುವಾಗಿ ಮಣಿಪುರದಿಂದ ಡ್ರಗ್ಸ್ ತಂದು ಮಾರಾಟ ಮಾಡುತ್ತಿದ್ದಳು.
ಡ್ರಗ್ಸ್ ವ್ಯಸನಿಯೊಬ್ಬ ನೀಡಿದ ಮಾಹಿತಿಯಾಧರಿಸಿ ಕಾರ್ಯಾಚರಣೆ ಕೈಗೊಂಡ ಬಾಣಸವಾಡಿ ಪೊಲೀಸ್ ಇನ್ಸ್‌ಪೆಕ್ಟರ್ ಸತೀಶ್ ಮತ್ತವರ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿ ೧೦ ಗ್ರಾಂ ಹೆರಾಯಿನ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.