ಸಂಜೆವಾಣಿ ವಾರ್ತೆ
ಹೊಸಪೇಟೆ, ಜು.23: ಮಣಿಪುರದಲ್ಲಿ ನಡೆದ ಮಹಿಳೆಯರ ಬೆತ್ತಲೆ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಿ, ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ, ಎಐಡಿವೈಓ ಕಾರ್ಯಕರ್ತರು, ಶನಿವಾರ ಪ್ರತಿಭಟನೆ ನಡೆಸಿದರು.
ತಹಶೀಲ್ದಾರ್ ಕಚೇರಿಗೆ ಎದುರು ಪ್ರತಿಭಟನೆ ನಡೆಸಿ, ಇದೊಂದು ಅಮಾನುಷ ಘಟನೆಯಾಗಿದ್ದು, ಇಡೀ ನಾಗರೀಕ ಸಮಾಜ ತಲೆ ತಗ್ಗಿಸುವ ಕೃತ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಾತಿ, ಬುಡಕಟ್ಟುಗಳ ನಡುವೆ ಬೆಳೆದಿರುವ ದ್ವೇಷಗಳನ್ನು ಜವಾಬ್ದಾರಿಯುತ ಅಲ್ಲಿನ ಸರ್ಕಾರ ಮತ್ತು ಜನಪ್ರತಿನಿಧಿಗಳು ಬಗೆಹರಿಸುವ ಕೆಲಸ ಮಾಡಬೇಕಿತ್ತು. ಈ ಘಟನೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿಯವರು, ಮೌನವಹಿಸಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಮೌಲ್ಯರಹಿತ ರಾಜಕೀಯ ಪ್ರಭಾವದಿಂದ ಸಮಾಜದಲ್ಲಿ ದಲಿತ, ಮಹಿಳೆ, ಅಲ್ಪಸಂಖ್ಯಾತರನ್ನು ನೋಡುವ ದೃಷ್ಠಿಕೋನ ವಿಕೃತಗೊಂಡಿದೆ. ದೌರ್ಜನ್ಯಗಳ ಸಂಖ್ಯೆ ದಿನೇ, ದಿನೇ ಏರುತ್ತಿರುವುದು ಕಳವಳದ ಸಂಗತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮಣಿಪುರ ಘಟನೆ ಇದಕ್ಕೆ ಬಿನ್ನವಾಗಿಲ್ಲ. ಜಾತಿ, ಧರ್ಮದ ಅಮಲನ್ನು ತಲೆಗೇರಿಸಿಕೊಂಡ ಕಿಡಿಗೇಡಿಗಳು, ಈ ಹೀನ ಕೃತ್ಯ ಎಸಗಿ ಪೈಶಾಚಿಕತೆ ಮೆರೆದಿದ್ದಾರೆ.
ರಾಜ್ಯಪಾಲರ ಆಳ್ವಿಕೆ ಜಾರಿ ಮಾಡಬೇಕು
ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಮಣಿಪುರದ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೂಡಲೇ ರಾಜ್ಯಪಾಲರು ಮಧ್ಯ ಪ್ರವೇಶಿಸಿ ಅಲ್ಲಿನ ಸರ್ಕಾರವನ್ನು ವಜಾಗೊಳಿಸಿ ರಾಜ್ಯಪಾಲರ ಆಳ್ವಿಕೆ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಎಐಡಿವೈಓ ಕಾರ್ಯದರ್ಶಿ ಪಂಪಾಪತಿ, ಸಂದೀಪ್, ಪ್ರಕಾಶ್ ನಾಯಕ್, ಮಂಜುಳಾ ಡೊಳ್ಳಿ, ಯಾಸ್ಮೀನ್, ಗೋಪಾಲಕೃಷ್ಣ, ವಿನೋದ್, ನಾಗರಾಜ್ ಉಮೇಶ್ ನಾಯಕ್, ಪಂಪಣ್ಣ ಹಾಗೂ ಶಿವಕುಮಾರ್ ಬಂಗಿ ಇನ್ನಿತರರಿದ್ದರು.
One attachment • Scanned by Gmail