ಮಣಿಪುರ: ಮತ್ತೆ ಭುಗಿಲೆದ್ದ ಹಿಂಸಾಚಾರ

ಇಂಫಾಲ್,ಮೇ.೧೫- ಮಣಿಪುರ ರಾಜ್ಯದಲ್ಲಿ ಜನಾಂಗೀಯ ಘರ್ಷಣೆಗಳಿಂದ ಸಾವಿನ ಸಂಖ್ಯೆ ೭೩ಕ್ಕೆ ಏರಿದೆ. ಈ ನಡುವೆ ಹೊಸದಾಗಿ ಹಿಂಸಾಚಾರ ಭುಗಿಲೆದ್ದಿದೆ.
ಶಂಕಿತ ಕುಕಿ ಉಗ್ರಗಾಮಿಗಳು ಮೈತೆಯ್ ಗ್ರಾಮದಲ್ಲಿ ಗುಂಡು ಹಾರಿಸಿ ದಾಳಿ ನಡೆಸಿದ ಪರಿಣಾಮ ಕನಿಷ್ಠ ೧೫ ಮನೆಗಳಿಗೆ ಬೆಂಕಿ ಹಚ್ಚಲಾಗಿದ್ದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.
ಮೇ ತಿಂಗಳಲ್ಲಿ ಬುಡಕಟ್ಟು ಗುಂಪುಗಳು ಮತ್ತು ಬಹುಸಂಖ್ಯಾತ ಮೈತಿ ಸಮುದಾಯದ ನಡುವಿನ ಘರ್ಷಣೆಯಿಂದ ರಾಜ್ಯದಲ್ಲಿ ಆವರಿಸಿರುವ ಹಿಂಸಾಚಾರವನ್ನು ಶಮನಗೊಳಿಸುವ ಮಾರ್ಗ ಕಂಡುಕೊಳ್ಳಲು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಮತ್ತು ಅವರ ನಾಲ್ವರು ಕ್ಯಾಬಿನೆಟ್ ಸಹೋದ್ಯೋಗಿಗಳು ದೆಹಲಿಗೆ ತೆರಳಿದ್ಧಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಇತರ ಕೇಂದ್ರ ಸಚಿವರೊಂದಿಗೆ ಸರಣಿ ಸಭೆ ನಡೆಸುವ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ.
ದಾಳಿಗಳು ಮತ್ತು ಪ್ರತಿದಾಳಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆಯನ್ನು ೭೩ ಕ್ಕೆ ಏರಿಕೆಯಾಗಿದೆ. ಕಲಹದಲ್ಲಿ ೬೦ ಅಮಾಯಕರು ಬಲಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಬಿರೇನ್ ಸಿಂಗ್ ತಿಳಿಸಿದ್ದಾರೆ.
ರಾಜಧಾನಿ ಇಂಫಾಲ್‌ನಿಂದ ಸುಮಾರು ೬೫ ಕಿಮೀ ದೂರದಲ್ಲಿರುವ ಕುಕಿ-ಚಿನ್-ಮಿಜೋ-ಝೋಮಿ ಪ್ರಾಬಲ್ಯದ ಗುಡ್ಡಗಾಡು ಜಿಲ್ಲೆಯಾದ ಚುರಾಚಂದ್‌ಪುರದ ಗಡಿಯಲ್ಲಿರುವ ಟೋರ್ಬಂಗ್ ಪ್ರದೇಶದ ಮೈತೆಯ್ ಗ್ರಾಮದಲ್ಲಿ ಶಂಕಿತ ಉಗ್ರಗಾಮಿಗಳ ಗುಂಡೇಟಿಗೆ ವ್ಯಕ್ತಿಯೊಬ್ಬ ಗಾಯಗೊಂಡಿದ್ದಾರೆ.