ಮಣಿಪುರ: ನಿಲ್ಲದ ಹಿಂಸಾಚಾರ ಪೇದೆ ಸೇರಿ ಐವರ ಸಾವು

ಇಂಫಾಲ, ಮೇ ೨೯- ಮಂಇಪುರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡುತ್ತಿರುವ ಬೆನ್ನಲ್ಲೇ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಓರ್ವ ಪೊಲೀಸ್ ಸಿಬ್ಬಂದಿ ಸೇರಿದಂತೆ ಐದು ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ೧೨ ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ನಿನ್ನೆ ನಡೆದ ಹಿಂಸಾಚಾರ ಸೇರಿದಂತೆ ಜನಾಂಗೀಯ ಗಲಭೆಯಲ್ಲಿ ಇದುವರೆಗೂ ೮೦ ಮಂದಿ ಬಲಿಯಾಗಿದ್ದಾರೆ.
ಇಂದು ಮುಂಜಾನೆ ಇಂಫಾಲದ ಸೆರೊಯು ಮತ್ತು ಸುಗೂನು ಪ್ರದೇಶದಲ್ಲಿ ದುಷ್ಕರ್ಮಿಗಳು ಹಲವು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯಿ ಪ್ರಯೋಗಿಸಿದ್ದಾರೆ.ಬಿಜೆಪಿ ಶಾಸಕರೊಬ್ಬರ ಮನೆಯನ್ನು ಧ್ವಂಸಗೊಳಿಸಲಾಗಿದೆ. ೧,೦೦೦ ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಮಣಿಪುರ ರೈಫಲ್ಸ್ ಮತ್ತು ಐಆರ್‌ಬಿ ಶಸ್ತ್ರಾಗಾರಗಳಿಂದ ಭಾನುವಾರ ಗುಂಪು ಲೂಟಿ ಮಾಡಿದ್ದು, ಕೇಂದ್ರ ಮತ್ತು ರಾಜ್ಯ ಭದ್ರತಾ ಪಡೆಗಳು ಹತ್ಯೆಗೈದಿವೆ.ರಾಜ್ಯ ಪೊಲೀಸ್ ಇಲಾಖೆಯ ಕಮಾಂಡೊಗಳು ಕಳೆದ ಎಂಟು ಗಂಟೆಗಳಿಂದ ಬಂಡುಕೋರರೊಂದಿಗೆ ಹೋರಾಡುತ್ತಿದ್ದು, ಇದುವರೆಗೆ ೪೦ ಬಂಡುಕೋರರನ್ನು ಹತ್ಯೆ ಮಾಡಲಾಗಿದೆ.ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿರುವ ಮುಖ್ಯಮಂತ್ರಿ ಬೀರೇನ್ ಸಿಂಗ್, ಇದುವರೆಗೆ ೪೦ ಬಂಡುಕೋರರನ್ನು ಹತ್ಯೆಗೈಯ್ಯಲಾಗಿದೆ ಎಂಬ ವರದಿ ನನ್ನ ಕೈ ಸೇರಿದೆ ಎಂದು ತಿಳಿಸಿದ್ದಾರೆ.ಬಂಡುಕೋರರು ನಾಗರಿಕರ ವಿರುದ್ಧ ಎಂ-೧೬, ಎಕೆ-೪೭ ಹಾಗೂ ಸ್ನೈಪರ್ ಗನ್‌ಗಳನ್ನು ಬಳಸುತ್ತಿದ್ದಾರೆ. ಅವರು ಮನೆಗಳನ್ನು ಸುಟ್ಟು ಹಾಕಲು ಗ್ರಾಮಗಳಿಗೆ ಧಾವಿಸಿದ್ದಾರೆ. ನಾವು ಸೇನೆ ಹಾಗೂ ಇತರ ಭದ್ರತಾ ಪಡೆಗಳ ನೆರವಿನೊಂದಿಗೆ ಅವರ ವಿರುದ್ಧ ಬಲವಾದ ಕ್ರಮ ಕೈಗೊಳ್ಳುತ್ತಿದ್ದೇವೆ.ಸುಮಾರು ೪೦ ಬಂಡುಕೋಋನ್ನು ಹತ್ಯೆಗೈಯ್ಯಲಾಗಿದೆ ಎಂಬ ವರದಿಗಳು ನಮ್ಮ ಕೈ ಸೇರಿವೆ ಎಂದು ಅವರು ಹೇಳಿದ್ದಾರೆ.ಬಂಡುಕೋರರು ನಿಶ್ಯಸ್ತ್ರ ನಾಗರಿಕರ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದಾರೆ ಎಂದು ತಿಳಿಸಿರುವ ಬೀರೇನ್ ಸಿಂಗ್, ಮಣಿಪುರವನ್ನು ಒಡೆಯಲು ಯತ್ನಿಸುತ್ತಿರುವ ಸಶಸ್ತ್ರ ಬಂಡುಕೋರರು ಹಾಗೂ ಕೇಂದ್ರ ಸರ್ಕಾರದ ನೆರವು ಹೊಂದಿರುವ ರಾಜ್ಯ ಸರ್ಕಾರದೊಂದಿಗೆ ಕಾಳಗ ನಡೆಯುತ್ತಿದೆ ಎಂದೂ ಪ್ರತಿಪಾದಿಸಿದ್ದಾರೆ.ಈ ಸಮಯದಲ್ಲಿ ಏಕಕಾಲಕ್ಕೆ ಇಂಫಾಲ ಕಣಿವೆಯ ಒಳಗೆ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಬಂಡುಕೋರರು ಐದು ದಾಳಿ ನಡೆಸಿದ್ದಾರೆ.