ಮಣಿಪುರ ಘಟನೆ ಮತ್ತು ಖರ್ಗೆ ಅವಹೇಳನ ಖಂಡಿಸಿ ಬೃಹತ್ ಪ್ರತಿಭಟನೆ

ಕಲಬುರಗಿ,ಆ.19: ಮಣಿಪುರ ಘಟನೆಯನ್ನು ಖಂಡಿಸಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಕುರಿತು ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಅವಹೇಳನ ಮಾಡಿರುವುದನ್ನು ಖಂಡಿಸಿ, ಆಳಂದ್ ತಾಲ್ಲೂಕಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪಿಗೆ ಕಠಿಣ ಕಾನೂನು ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಶನಿವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡಿದರು.
ಪ್ರತಿಭಟನೆಕಾರರು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿ, ಮಣಿಪುರದಲ್ಲಿ ಕುಕ್ಕೆ ಸಮುದಾಯಕ್ಕೆ ಸೇರಿದ ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಪ್ರಕರಣ ಇಡೀ ಸಮಾಜವೇ ನಾಚಿ ತೆಲೆತಗ್ಗಿಸುವಂತಹ ಘಟನೆಯಾಗಿದೆ. ಅದನ್ನು ತಡೆಯುವಲ್ಲಿ ಬಿಜೆಪಿ. ನೇತೃತ್ವದ ಮಣಿಪುರ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿದೆ. ಕೂಡಲೇ ಮಣಿಪುರ ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯ ಆಳಂದ್ ತಾಲ್ಲೂಕಿನ ದ್ಯಾವಂತಗಿ ಗ್ರಾಮದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿ ಭಾವಿಯಲ್ಲಿ ಎಸಗಿರುವುದನ್ನು ನಮ್ಮ ಸಮಿತಿಯ ಉಗ್ರವಾಗಿ ಖಂಡಿಸುತ್ತದೆ. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಭಾವಿಯಲ್ಲಿ ಎಸೆದಿರುವುದು ಪೋಲಿಸರು ಗಂಭಿರವಾಗಿ ಪರಿಗಣಿಸಿ ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಅವರು ಆಗ್ರಹಿಸಿದರು.
ಅಲ್ಲದೇ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರು ಮತ್ತು ಬುದ್ಧ, ಬಸವ, ಡಾ. ಅಂಬೇಡ್ಕತರ್ ಅನುಯಾಯಿಗಳಾದ ಡಾ. ಮಲ್ಲಿಕಾರ್ಜುನ್ ಖರ್ಗೆಯವರು ದೇಶದ ಕೋಟಿ ಕೋಟಿ ಜನರ ಧ್ವನಿಯಾಗಿದ್ದಾರೆ. ಖರ್ಗೆಯವರಗ್ಗೆ ಅಪ್ಪಟ ಹಿಂದುವಾದಿ ಜಾತಿವಾದಿ ಮನಸ್ಥಿತಿಯ ಮಾಜಿ ಸಚಿವರು ಅರಗ ಜ್ಞಾನೇಂದ್ರ ಅವರು ಅಡಿರುವ ಮಾತು ಕೇಶವ ಕೃಪದ ಪ್ರಭಾವದ ಮಾತು. ಅವರ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದ್ದರೂ ಸಹ ಅವರನ್ನು ಬಂಧಿಸಿಲ್ಲ. ಕೂಡಲೇ ಅವರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಸಮಿತಿಯ ರಾಜ್ಯ ಸಂಚಾಲಕ ಡಾ. ಡಿ.ಜಿ. ಸಾಗರ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೋಲಿ ಸಮಾಜದ ಹಿರಿಯ ಮುಖಂಡ ಲಚ್ಚಪ್ಪ ಜಮಾದಾರ್, ಪ್ರಗತಿಪರ ಚಿಂತಕ ಪ್ರೊ. ಆರ್.ಕೆ. ಹುಡಗಿ, ಡಾ. ಹಣಮಂತರಾವ್ ದೊಡ್ಡಮನಿ ಮುಂತಾದವರು ಪಾಲ್ಗೊಂಡಿದ್ದರು.