ಕಲಬುರಗಿ,ಜು.28-ಮಣಿಪುರದಲ್ಲಿ ನಡೆದ ಆದಿವಾಸಿ ಬುಡಕಟ್ಟು ಕುಕಿ ಸಮುದಾಯಕ್ಕೆ ಸೇರಿದ ಹೆಣ್ಣು ಮಕ್ಕಳ ಬೆತ್ತಲೆ ಮೆರವಣಿಗೆ ಮತ್ತು ಸಾಮೂಹಿಕ ಅತ್ಯಾಚಾರ ಘಟನೆಯನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ನೇತೃತ್ವದಲ್ಲಿ ನಗರದ ಜಗತ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಮಣಿಪುರದಲ್ಲಿ ನಡೆಯುತ್ತಿರುವ ನಡೆಯುತ್ತಿರುವ ಘಟನೆಗಳನ್ನು ನಿಯಂತ್ರಿಸಲು ವಿಫಲವಾಗಿರುವ ಅಲ್ಲಿನ ರಾಜ್ಯ ಸರ್ಕಾರವನ್ನು ಕೂಡಲೇ ವಜಾಗೊಳಿಸಬೇಕು, ಕುಕಿ ಸಮುದಾಯಕ್ಕೆ ಸೇರಿದ ಮಹಿಳೆಯರ ಬೆತ್ತಲೆ ಮೆರವಣಿಗೆ ಮತ್ತು ಸಾಮೂಹಿಕ ಅತ್ಯಾಚಾರವೆಸಗಿದವರ ಮೇಲೆ ಕಠಿಣ ಕ್ರಮ ಜರುಗಿಸಬೇಕು, ರಾಷ್ಟ್ರದ ಐಕ್ಯತೆ ಮತ್ತು ಭದ್ರತೆಗೆ ಕಂಠಕಪ್ರಾಯವಾದ ಆರ್.ಎಸ್.ಎಸ್.ನಿಷೇಧಿಸಬೇಕು, ಮಣಿಪುರದ ಆದಿವಾಸಿ ಬುಡಕಟ್ಟು ಕುಕಿ ಮತ್ತು ನಾಗ ಸಮುದಾಯಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು, ಮಣಿಪುರ ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನಾ ಮೆರವಣಿಗೆ ನಂತರ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿಪತ್ರ ಸಲ್ಲಿಸಲಾಯಿತು.
ಎಸ್.ಆರ್.ಕೊಲ್ಲೂರ, ಅರ್ಜುನ ಗೊಬ್ಬೂರ, ಅರ್ಜುನ ಭದ್ರೆ, ಮಲ್ಲಿಕಾರ್ಜುನ ಖನ್ನಾ, ಮಹಾಂತೇಶ ಬಡದಾಳ, ಮಹಾದೇವ ಕೋಳಕೂರ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.