ಮಣಿಪುರ ಗ್ಯಾಂಗ್ ಸೆರೆ: ೬೦ ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶ


ಬೆಂಗಳೂರು, ಏ. ೧೨- ಡ್ರಗ್ಸ್ ಸರಬರಾಜು, ಮಾರಾಟದ ವಿರುದ್ಧ ಸಮರ ಸಾರಿರುವ ಪೂರ್ವ ವಿಭಾಗದ ಪೊಲೀಸರು ಮೂವರು ಅಂತಾರಾಜ್ಯ ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಿಕ್ಕಬಾಣಸವಾಡಿಯ ಮಹಮದ್ ಸಜ್ಜಿದ್‌ಖಾನ್ (೨೬), ಕಮ್ಮನಹಳ್ಳಿಯ ಮಹಮದ್ ಏಜಾಜ್ (೨೭), ಹೆಣ್ಣೂರು ಕ್ರಾಸ್‌ನ ಸಂಪಮ್ ಶೀಥಲ್‌ಕುಮಾರ್ ಸಿಂಗ್ (೨೫) ಬಂಧಿತ ಆರೋಪಿಗಳಾಗಿದ್ದಾರೆ.
ಮಣಿಪುರ ಮೂಲಕ ಬಂಧಿತ ಈ ಮೂವರು ಡ್ರಗ್ಸ್ ಪೆಡ್ಲರ್‌ಗಳಿಂದ ೬೦ ಲಕ್ಷ ರೂ. ಮೌಲ್ಯದ ೧೩೦ ಗ್ರಾಂ ಎರಾಯಿನ್, ೨೪೮೦ ಎಕ್ಸಟೆನ್ಸಿ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಡಾ. ಶರಣಪ್ಪ ಅವರು ತಿಳಿಸಿದ್ದಾರೆ.
ಆರೋಪಿಗಳು ಕೆ.ಜಿ.ಹಳ್ಳಿಯ ಹೆಚ್.ವಿ.ಆರ್. ಲೇಔಟ್‌ನ ಬಿ.ಕೆ. ಕಾಂಪ್ಲೆಕ್ಸ್ ಬಳಿ ಸ್ಕೂಟರ್‌ನಲ್ಲಿ ಡ್ರಗ್ಸ್ ಇಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಕಾರ್ಯಾಚರಣೆ ಕೈಗೊಂಡ ಕೆ.ಜಿ. ಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ಸಂತೋಷ್‌ಕುಮಾರ್ ಮತ್ತವರ ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು ಡ್ರಗ್ಸ್‌ನ್ನು ನೆರೆಯ ಮ್ಯಾನ್‌ಮಾರ್ ದೇಶದ ಗಡಿ ಮೂಲಕ ಮಣಿಪುರಕ್ಕೆ ತಂದು ಅಲ್ಲಿಂದ ಲಿಕ್ಕರ್ ಗ್ರೈಂಡರ್‌ಗಳ ಬಾಕ್ಸ್‌ಗಳಲ್ಲಿ ಇಟ್ಟುಕೊಂಡು ನಗರಕ್ಕೆ ಕಳ್ಳ ಸಾಗಾಣಿಕೆ ಮಾಡುತ್ತಿದ್ದರು. ಪೊಲೀಸರ ಕಣ್ತಪ್ಪಿಸಲು ಸೋಪು ಬಾಕ್ಸ್‌ಗಳಲ್ಲಿ ಪ್ಯಾಕಿಂಗ್ ಮಾಡಿ ಮಣಿಪುರಿ ಭಾಷೆಯಲ್ಲಿ ಕೋಡ್‌ವರ್ಡ್‌ಗಳನ್ನು ಬರೆಸಿ ಮಾರಾಟ ಮಾಡುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದರು.
ಪ್ರಮುಖ ಆರೋಪಿಗಳಾದ ಮಹಮದ್ ಸಜ್ಜಾದ್ ಹಾಗೂ ಏಜಾಜ್ ಶಿವಾಜಿನಗರದ ಕೋಳಿ ಅಂಗಡಿಯಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದರು. ಮತ್ತೊಬ್ಬ ಆರೋಪಿ ಸಿ.ಎಂ.ಆರ್. ಕಾಲೇಜಿನಲ್ಲಿ ೨ನೇ ವರ್ಷದ ಬಿಬಿಎ ಪದವಿ ವಿದ್ಯಾರ್ಥಿಯಾಗಿದ್ದು, ಅಕ್ರಮ ಹಣ ಗಳಿಸುವ ಉದ್ದೇಶದಿಂದ ಡ್ರಗ್ಸ್‌ನ್ನು ಮಾರಾಟ ಮಾಡುತ್ತಿದ್ದರು ಎಂದು ತಿಳಿಸಿದರು.
ಆರೋಪಿಗಳು ಮೊಬೈಲ್, ವಾಟ್ಸಾಪ್ ಗ್ರೂಪ್‌ಗಳ ಮೂಲಕವೂ ಡ್ರಗ್ಸ್ ಮಾರಾಟ ಮಾಡುತ್ತಿದ್ದು, ಮೂರು ಮೊಬೈಲ್‌ಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಲಾಗಿದೆ. ಆರೋಪಿಗಳು ಹಲವು ದಿನಗಳಿಂದ ವ್ಯವಸ್ಥಿತ ಜಾಲ ಸೃಷ್ಠಿಸಿ ಗ್ಯಾಂಗ್ ಕಟ್ಟಿಕೊಂಡು ಡ್ರಗ್ಸ್ ಮಾರಾಟ ಮಾಡುತ್ತಿದ್ದರು ಎಂದು ಡಿಸಿಪಿ ಶರಣಪ್ಪ ತಿಳಿಸಿದ್ದರು.