ಮಣಿಪುರ ಗಲಭೆ, ಸೂಕ್ತ ಕ್ರಮಕ್ಕೆ ರಾಷ್ಟ್ರಪತಿಗಳಿಗೆ ಆಗ್ರಹ

ಸಂಜೆವಾಣಿ ವಾರ್ತೆ

ದಾವಣಗೆರೆ.ಜು.೨೫: ಮಣಿಪುರದ ಜನಾಂಗೀಯ ಗಲಭೆ, ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ ಪ್ರಧಾನ ಮಂತ್ರಿಗಳು ಹಾಗೂ ಗೃಹ ಸಚಿವರ ವಿರುದ್ಧ ರಾಷ್ಟ್ರಪತಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪೀಪಲ್ಸ್ ಲಾಯರ್ಸ್ ಗಿಲ್ಡ್ ನೇತೃತ್ವದಲ್ಲಿ ನಗರದ ವಕೀಲರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ಒತ್ತಾಯಿಸಿದರು.ಮಣಿಪುರ ರಾಜ್ಯದಲ್ಲಿ ಕಳೆದ 82ದಿನಗಳಿಂದ ಜನಾಂಗೀಯ ಗಲಭೆ ನಡೆಯುತ್ತಿದೆ. 150ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 40ಸಾವಿರಕ್ಕೂ ಅಧಿಕ ಜನರು ನಿರಾಶ್ರಿತರಾಗಿದ್ದಾರೆ. ಇದಲ್ಲದೇ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿವೆ. ಇಂತಹ ಕೃತ್ಯಗಳನ್ನು ದೇಶದ ಸರ್ವೋಚ್ಛ ನ್ಯಾಯಾಲಯವೂ ಕೂಡ ಖಂಡಿಸಿ, ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಆದರೂ ಪ್ರಧಾನಮಂತ್ರಿಗಳ ಹೇಳಿಕೆ ಜನರ ಕಣ್ಣೊರೆಸುವ ತಂತ್ರವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತ ಪಡಿಸಿದರು. ಮಣಿಪುರದಲ್ಲಿ ನಡೆಯುತ್ತಿರುವ ಗಲಭೆಗಳನ್ನು ನಿಯಂತ್ರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿದ್ದು, ಪ್ರಧಾನ ಮಂತ್ರಿಗಳು ಜನರ ರಕ್ಷಣೆ ಬದಲು, ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಕೇಂದ್ರ ಸರ್ಕಾರಕ್ಕೆ ದೇಶದ ಜನತೆಯ ನೆಮ್ಮದಿಗಿಂತ ಚುನಾವಣೆಯೇ ತುಂಬಾ ಪ್ರಾಮುಖ್ಯವಾಗಿದೆ ಎಂದು ಕಿಡಿಕಾರಿದರು.ಮಣಿಪುರದಲ್ಲಿ ನಡೆದಿರುವ ಜನಾಂಗೀಯ ಗಲಭೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೇರ ಹೊಣೆಯಾಗಿವೆ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡಿರುವ ನಿರ್ಲಕ್ಷತನ ಮತ್ತು ತಪ್ಪಿಗೆ ಪ್ರಧಾನ ಮಂತ್ರಿಗಳ ಮತ್ತು ಗೃಹ ಸಚಿವರ ವಿರುದ್ಧ ರಾಷ್ಟ್ರಪತಿಗಳು ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ರಾಜಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಪೀಪಲ್ಸ್ ಲಾಯರ್ಸ್ ಗಿಲ್ಡ್ ಜಿಲ್ಲಾಧ್ಯಕ್ಷ ಅನೀಸ್ ಪಾಷ, ಆಂಜನೇಯ ಗುರೂಜಿ, ಪ್ರಕಾಶ್ ಪಾಟೀಲ್, ಬೈರೇಶ್ವರ ಬಿ.ಎಂ., ಲೋಕಿಕೆರೆ ಪ್ರದೀಪ, ಹೆಚ್.ಎಂ.ನಾಯ್ಕ, ಸವಿತ.ಎಸ್, ಮಂಜುಳಾ, ನಾಗರಾಜ, ವಾಗೀಶ್ ಕಟಗಿಹಳ್ಳಿಮಠ, ಪ್ರಕಾಶ್ ಬಾತಿ, ಚಕ್ರವರ್ತಿ, ರುದ್ರೇಶ್, ಹನೀಫ್, ಗುರುಮೂರ್ತಿ, ಅಜಯ್, ಅಂಜಿನಪ್ಪ, ಶಿವರಾಜ್, ಕರಿಯಪ್ಪ, ಮಾಲತೇಶ್, ಪಾಪಣ್ಣ, ಮುಸ್ತಫಾ ಇತರರು ಇದ್ದರು.