ಮಣಿಪುರ ಗಲಭೆ ನಿಯಂತ್ರಣ, ಸೂಕ್ತ ಕ್ರಮಕ್ಕೆ ಅಗ್ರಹಿಸಿ ರಾಷ್ಟ್ರಪತಿಗಳಿಗೆ ಮನವಿ

ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೨೫: ಮಣಿಪುರದ ಜನಾಂಗೀಯ ಗಲಭೆ, ಮಹಿಳೆಯರ ಮೇಲಿನ ಅತ್ಯಾಚಾರ, ಬೆತ್ತಲೆ ಮೆರವಣಿಗೆ ಮಾಡಿದ ದುಷ್ಕರ್ಮಿಗಳ ವಿರುದ್ಧ ರಾಷ್ಟ್ರಪತಿಗಳು ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಭಾರತ ಕಮ್ಯೂನಿಸ್ಟ್ ಪಕ್ಷದ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಸಿಪಿಐ ಮುಖಂಡರು, ಕಾರ್ಯಕರ್ತರು, ಮಣಿಪುರ ರಾಜ್ಯದಲ್ಲಿ ಕಳೆದ 2 ತಿಂಗಳಿಂದ ಜನಾಂಗೀಯ ಗಲಭೆ ನಡೆಯುತ್ತಿದೆ. 150ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 40ಸಾವಿರಕ್ಕೂ ಅಧಿಕ ಜನರು ನಿರಾಶ್ರಿತರಾಗಿದ್ದಾರೆ. ಇದಲ್ಲದೇ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿವೆ. ಹಿಂಸಾಚಾರ ನಿಯಂತ್ರಣ ಮಾಡುವಲ್ಲಿ ಮಣಿಪುರದ ಮುಖ್ಯಮಂತ್ರಿ, ದೇಶದ ಪ್ರಧಾನ ಮಂತ್ರಿಗಳು ವಿಫಲರಾಗಿದ್ದು, ಉಭಯತರಿಂದ ರಾಜೀನಾಮೆ ಪಡೆಯಬೇಕೆಂದು ಆಗ್ರಹಿಸಿದರು.ಇಂತಹ ಕೃತ್ಯಗಳನ್ನು ದೇಶದ ಸರ್ವೋಚ್ಛ ನ್ಯಾಯಾಲಯವೂ ಕೂಡ ಖಂಡಿಸಿ, ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಆದರೂ ಪ್ರಧಾನಮಂತ್ರಿಗಳ ಹೇಳಿಕೆ ಜನರ ಕಣ್ಣೊರೆಸುವ ತಂತ್ರವಾಗಿದೆ. ಇದಲ್ಲದೆ ಮಣಿಪುರ ರಾಜ್ಯದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲು ಹೋರಾಟಕ್ಕೆ ಮುಂದಾದ ಎನ್ ಎಫ್ ಐ ಡಬ್ಲ್ಯೂ ಸಂಘಟನೆಯ ಮಹಿಳಾ ಮುಖಂಡರ ಮೇಲೆ ಪೊಲೀಸರು ದಾಖಲು ಮಾಡಿರುವ ಎಫ್ ಐ ಆರ್ ರದ್ದು ಮಾಡಬೇಕೆಂದು ಒತ್ತಾಯಿಸಿದರು.ಈ ವೇಳೆ ಸಿಪಿಐನ ಆವರಗೆರೆ ಚಂದ್ರು, ಹೆಚ್.ಜಿ.ಉಮೇಶ್, ಆವರಗೆರೆ ವಾಸು, ಆನಂದರಾಜ್, ಗದಿಗೇಶ್ ಪಾಳೇದ, ನರೇಗಾ ರಂಗನಾಥ, ಹೆಚ್.ಪಿ.ಉಮಾಪತಿ, ಸರೋಜ, ಪಿ.ಬಿ.ಕೇಶವ, ನೇತ್ರಾವತಿ, ಐರಣಿ ಚಂದ್ರು, ಸುರೇಶ್, ಬಸವರಾಜ್, ಗುಂಡಯ್ಯ, ಚಮನ್ ಸಾಬ್, ಜಯಣ್ಣ, ಕೃಷ್ಣಮೂರ್ತಿ, ಹಾಲೇಶ್, ಲಕ್ಷ್ಮಣ್ ಇತರರು ಇದ್ದರು.