ಮಣಿಪುರ ಗಲಭೆ ನಿಯಂತ್ರಣ, ಕ್ರಮಕ್ಕೆ ಆಗ್ರಹ; ಕಾಂಗ್ರೆಸ್ ಪ್ರತಿಭಟನೆ

ಸಂಜೆವಾಣಿ ವಾರ್ತೆ

ದಾವಣಗೆರೆ.ಜು.೨೬: ಮಣಿಪುರದ ಜನಾಂಗೀಯ ಗಲಭೆ, ಮಹಿಳೆಯರ ಮೇಲಿನ ಅತ್ಯಾಚಾರ, ಬೆತ್ತಲೆ ಮೆರವಣಿಗೆ ಮಾಡಿದ ದುಷ್ಕರ್ಮಿಗಳ ವಿರುದ್ಧ ರಾಷ್ಟ್ರಪತಿಗಳು ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾ ಕಾಂ ಗ್ರೆಸ್ ಪಕ್ಷದ ಕಾರ್ಯಕರ್ತರು ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ಈ ವೇಳೆ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ, ಈಶಾನ್ಯ ಭಾರತದ ಮಣಿಪುರ ರಾಜ್ಯದಲ್ಲಿ ಹಲವಾರು ದಿನಗಳಿಂದ ಜನಾಂಗೀಯ ಹಿಂಸೆ ನಡೆಯುತ್ತಿದ್ದು, 150ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 40ಸಾವಿರಕ್ಕೂ ಅಧಿಕ ಜನರು ನಿರಾಶ್ರಿತರಾಗಿದ್ದಾರೆ. ಇದಲ್ಲದೇ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿವೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾದ ದೇಶದ ಪ್ರಧಾನಿ ಮೋದಿ, ಕೇವಲ ವಿದೇಶಗಳಿಗೆ ಹೋಗುವ ಮೂಲಕ ಫ್ಯಾಷನ್ ಷೋ ಮಾಡುವ ರೀತಿಯಲ್ಲಿ ಬಣ್ಣಬಣ್ಣದ ಬಟ್ಟೆಗಳನ್ನು ಹಾಕಿಕೊಂಡು ಮೋಜು ಮಾಡಿ ಬರುತ್ತಿದ್ದಾರೆ. ಮೋದಿಗೆ ದೇಶದಲ್ಲಿ ನಡೆಯುತ್ತಿರುವ ಗಲಭೆಗಳು ಕಣ್ಣಿಗೆ ಕಾಣುತ್ತಿಲ್ಲವೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಯಾಕೆ ಮುಂದಾಗುತ್ತಿಲ್ಲ ಎಂದು ಕಿಡಿಕಾರಿದರು.ಮಹಿಳಾ ಘಟಕದ ಅಧ್ಯಕ್ಷೆ ಅನಿತಾಬಾಯಿ ಮಾತನಾಡಿ, ಮಣಿಪುರ ರಾಜ್ಯದಲ್ಲಿ ಕಳೆದ 2 ತಿಂಗಳಿಂದ ಜನಾಂಗೀಯ ಗಲಭೆ ನಡೆಯುತ್ತಿದೆ. ಈ ಬಗ್ಗೆ ಮಣಿಪುರ ರಾಜ್ಯದ ಸಿಎಂ, ದೇಶದ ಪಿಎಂ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗದೇ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ. ದೇಶದ ಎಲ್ಲಾ ಮಹಿಳೆಯರು ಒಂದೇ. ಆದರೆ ಹಿಂಸಾಚಾರ ನಿಯಂತ್ರಣ ಮಾಡುವಲ್ಲಿ ಮಣಿಪುರದ ಮುಖ್ಯಮಂತ್ರಿ, ದೇಶದ ಪ್ರಧಾನ ಮಂತ್ರಿಗಳು ವಿಫಲರಾಗಿದ್ದು, ಉಭಯತರಿಂದ ರಾಜೀನಾಮೆ ಪಡೆಯಬೇಕೆಂದು ಆಗ್ರಹಿಸಿದರು.ಶುಭಮಂಗಳ ಮಾತನಾಡಿ, ಇಂತಹ ಕೃತ್ಯಗಳನ್ನು ದೇಶದ ಸರ್ವೋಚ್ಛ ನ್ಯಾಯಾಲಯವೂ ಕೂಡ ಖಂಡಿಸಿ, ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಆದರೂ ಪ್ರಧಾನಮಂತ್ರಿಗಳ ಹೇಳಿಕೆ ಜನರ ಕಣ್ಣೊರೆಸುವ ತಂತ್ರವಾಗಿದೆ. ಇದಲ್ಲದೆ ಮಣಿಪುರ ರಾಜ್ಯದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲು ಈ ಕೂಡಲೇ ರಾಷ್ಟ್ರಪತಿಗಳು ಮುಂದಾಗಬೇಕೆಂದು ಒತ್ತಾಯಿಸಿದರು.ಈ ವೇಳೆ  ಕಾಂಗ್ರೆಸ್ ಪಕ್ಷದ ಎ.ನಾಗರಾಜ್, ಎಸ್. ಮಲ್ಲಿಕಾರ್ಜುನ, ಟಿ.ಶಿವಕುಮಾರ್, ರಾಜೇಶ್ವರಿ, ದ್ರಾಕ್ಷಾಯಣಮ್ಮ, ಬಾಬುರಾವ್ ಸಾಳಂಕಿ, ರುದ್ರಮ್ಮ, ಸುರೇಖಾ, ಟಿ.ಯುವರಾಜ್, ಅಲೆಕ್ಸಾಂಡರ್ ಜಾನ್, ರಾಜು ಭಂಢಾರಿ, ಶ್ರೀಕಾಂತ್ ಬಗೇರಾ, ಕವಿತಾ ಚಂದ್ರಶೇಖರ, ಗೀತಾ ಪ್ರಶಾಂತ, ರೇಷ್ಮಾ, ಸತೀಶ್ ಶೆಟ್ಟಿ ಇತರರು ಇದ್ದರು.