
ಗುವಾಹಟಿ,ಆ.೮-ಹಿಂಸಾಚಾರ ಪೀಡಿತ ಮಣಿಪರದಲ್ಲಿ ನಾಗರಿಕರ ಮೇಲೆ ಕೇಂದ್ರೀಯ ಅರೆಸೇನಾ ಪಡೆ ದೌರ್ಜನ್ಯ ನಡೆಸುತ್ತಿದೆ ಎಂದು ಆರೋಪಿಸಿ ನೂರಾರು ಮಹಿಳಾ ಕಾರ್ಯಕರ್ತರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬಿಷ್ಣುಪುರ ಜಿಲ್ಲೆಯ ಮೊಯಿರಾಂಗ್ ಲಾಮ್‌ಖೈನಲ್ಲಿನ ನಿರ್ಣಾಯಕ ಚೆಕ್‌ಪಾಯಿಂಟ್‌ನಲ್ಲಿ ಅಸ್ಸಾಂ ರೈಫಲ್ಸ್ ಪಡೆ ನೂರಾರು ಮಹಿಳೆಯರನ್ನು ತಡೆಯುವಲ್ಲಿ ಯಶಸ್ವಿಯಾಗಿದೆ.
ಈ ಘಟನೆ ಹಿನ್ನೆಲೆಯಲ್ಲಿ ಬಿಷ್ಣುಪುರ್-ಕಾಂಗ್ವಾಯ್ ರಸ್ತೆಯ ಚೆಕ್‌ಪಾಯಿಂಟ್‌ನಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ೯ ಅಸ್ಸಾಂ ರೈಫಲ್ಸ್ ಅನ್ನು ಪೊಲೀಸ್ ಮತ್ತು ಸಿಆರ್‍ಪಿಎಫ್ ತುಕಡಿಗಳು ಬದಲಾಯಿಸಲಿವೆ ಎಂದು ಪೊಲೀಸ್ ಮಹಾನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಮಣಿಪುರದಾದ್ಯಂತ ಹೊಸದಾಗಿ ಸಂಭವಿಸಿದ ಹಿಂಸಾಚಾರದಲ್ಲಿ ೨೩ ಮಂದಿ ಗಾಯಗೊಂಡಿದ್ದಾರೆ. ಮುಖ್ಯಮಂತ್ರಿ ಬಿರೆನ್ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲವಾಗಿದೆ ಎಂದು ಮಹಿಳೆಯರು ಆರೋಪಿಸಿದ್ದಾರೆ.
ಮೀರಾ ಪೈಬಿಸ್ ಅಥವಾ “ಮಹಿಳಾ ಪಂಜುಧಾರಿಗಳ” ಸಮೂಹದ ಜೊತೆಗೆ, ಕೆಲವು ಬಿಜೆಪಿ ಶಾಸಕರು ಮತ್ತು ಸಂಘಟನೆಗಳು ಈ ಪ್ರತಿಭಟನೆಯಲ್ಲಿ ಇದ್ದರು ಎನ್ನಲಾಗಿದ್ದು ಅಸ್ಸಾಂ ರೈಫಲ್ಸ್ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಬಿಷ್ಣುಪುರ್ ಮತ್ತು ಚುರಾಚಂದ್‌ಪುರ ಜಿಲ್ಲೆಗಳಿಗೆ ಹೋಗುವ ಟಿಡ್ಡಿಮ್ ರಸ್ತೆ ಸೇರಿದಂತೆ ಅನೇಕ ಸ್ಥಳಗಳಲ್ಲಿ ಸಾಂಪ್ರದಾಯಿಕ ಕೆಂಪು ಉಡುಪಿನಲ್ಲಿ ಮಹಿಳೆಯರ ಗುಂಪುಗಳು ರಸ್ತೆಗಳನ್ನು ಬಂಧ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ, ವಾರಾಂತ್ಯದಲ್ಲಿ ಆರು ಜನರು ಸಾವನ್ನಪ್ಪಿದರು ಮತ್ತು ೧೬ ಮಂದಿ ಗಾಯಗೊಂಡಿದ್ದರು.
ಇಂಫಾಲ್‌ನ ಸಿಂಗ್‌ಜಮೇಯ್‌ನಲ್ಲಿರುವ ಅಸ್ಸಾಂ ರೈಫಲ್ಸ್ ಪೋಸ್ಟ್‌ಗೆ ಮೆರವಣಿಗೆ ನಡೆಸುತ್ತಿದ್ದ ಒಂದು ಗುಂಪನ್ನು ಪೊಲೀಸರು ತಡೆದರು. ಇಂಫಾಲ್ ಪಶ್ಚಿಮ ಜಿಲ್ಲೆಯ ಕ್ವಾಕಿಥೆಲ್ ಮತ್ತು ಉರಿಪೊ?ಕ್, ಇಂಫಾಲ್ ಪೂರ್ವ ಜಿಲ್ಲೆಯ ಅಂಗೋಮ್ ಮತ್ತು ಖುರೈ ಮತ್ತು ತೌಬಾಲ್ ಮತ್ತು ಬಿಷ್ಣುಪುರ್‍ನ ಭಾಗಗಳಲ್ಲಿ ಪ್ರತಿಭಟನೆ ನಡೆದಿದೆ.
ಅಸ್ಸಾಂ ರೈಫಲ್ಸ್ ವಿರುದ್ಧ ಸಾರ್ವಜನಿಕ ಭಾವನೆಯ ಅಲೆ ತೀವ್ರಗೊಂಡಿದ್ದು, ಪೊಲೀಸ್ ಸಿಬ್ಬಂದಿ ತಮ್ಮ ಕಾರ್ಯಾಚರಣೆಯ ಶೈಲಿಯ ಬಗ್ಗೆ ಅರೆಸೈನಿಕ ಪಡೆಯ ಸದಸ್ಯರೊಂದಿಗೆ ವಾಗ್ವಾದ ಮಾಡುತ್ತಿರುವ ವೀಡಿಯೊ ಬಿಡುಗಡೆ ಮಾಡಲಾಗಿದೆ.