ಮಣಿಪುರದಲ್ಲಿ  ಶಾಂತಿ, ಸೌಹಾರ್ದತೆಗೆ ಆಗ್ರಹಿಸಿ, ಎಐವೈಎಫ್, ಸಿಪಿಐ ಪ್ರತಿಭಟನೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.25: ಮಣಿಪುರದಲ್ಲಿ ಶಾಂತಿ ಹಾಗೂ ಸೌಹಾರ್ದತೆ ಸೃಷ್ಟಿಸಬೇಕು, ಗಲಭೆಯನ್ನು ನಿಯಂತ್ರಿಸಬೇಕು, ಎನ್ ಎಫ್ ಐ ಡಬ್ಲ್ಯೂ ಮುಖಂಡರ ವಿರುದ್ಧ ದಾಖಲಾದ ಪ್ರಕರಣಗಳನ್ನು ಹಿಂಪಡೆಯಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಎಐವೈಎಫ್ ಹಾಗೂ ಸಿಪಿಐ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು. ಇದಕ್ಕೂ ಮುನ್ನ ಮಣಿಪುರದ ಬಿಜೆಪಿ ಸರ್ಕಾರದ ವಿರುದ್ಧ ಕಾರ್ಯಕರ್ತರು ನಾನಾ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಎಐವೈಎಫ್ ಜಿಲ್ಲಾಧ್ಯಕ್ಷ ಕಟ್ಟೆ ಬಸಪ್ಪ  ಮಾತನಾಡಿ, ಮಣಿಪುರದಲ್ಲಿ ಎದ್ದಿರುವ ದಾಂಧಲೆ, ಗಲಭೆ, ಹಿಂಸಾಚಾರಕ್ಕೆ ಸರ್ಕಾರ ಕೂಡಲೇ ಕಡಿವಾಣ ಹಾಕಬೇಕು, ಗಲಭೆಯನ್ನು ನಿಯಂತ್ರಿಸುವಲ್ಲಿ ವಿಫಲವಾದ ಮಣಿಪುರದ ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು, ನಿರ್ಲಕ್ಷ್ಯ ವಹಿಸಿದರೇ ಪ್ರತಿಭಟನೆಯ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಎ.ಆದಿಮೂರ್ತಿ ಮಾತನಾಡಿ, ಮಣಿಪುರದಲ್ಲಿ ಕಳೆದ ಸುಮಾರು ದಿನಗಳಿಂದ ಹಿಂಸಾಚಾರ, ಗಲಭೆ, ದಾಂಧಲೆ ಸೇರಿದಂತೆ ರಾಜ್ಯದಲ್ಲಿ ಅಶಾಂತಿ ಸೃಷ್ಟಿಯಾಗಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೂಡಲೇ ಶಾಂತಿ ಹಾಗೂ ಸೌಹಾರ್ದತೆ ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ಘಟನೆಯ ನೈತಿಕ ಹೊಣೆಹೊತ್ತು ಮಣಿಪುರ ರಾಜ್ಯದ ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ನಿರ್ಲಕ್ಷ್ಯ ವಹಿಸಿದರೇ ದೇಶಾದ್ಯಂತ ಪ್ರತಿಭಟನೆಯ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು. ಅಕ್ರಮ ಸಶಾಸ್ತ್ರಗಳನ್ನು ಹೊಂದಿರುವ ವ್ಯಕ್ತಿಗಳಿಂದ ಕೂಡಲೇ ವಶಪಡಿಸಿಕೊಂಡು, ಅವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು, ಅಕ್ರಮವಾಗಿ ಅರಣ್ಯ ಪ್ರದೇಶದಲ್ಲಿ ಬೆಳೆಯುತ್ತಿರುವ ಗಸಗಸೆ ಕೃಷಿಯನ್ನು ತಡೆಯಬೇಕು, ಅಕ್ರಮವಾಗಿ ವಲಸೆ ಬರುವವರ ವಿರುದ್ದ ಕ್ರಮಕೈಗೊಳ್ಳಬೇಕು, ಮಣಿಪುರ ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತಗೊಳಿಸಬೇಕು, ಜನರಿಗೆ ಅಗತ್ಯ ಆಹಾರ ಸಾಮಗ್ರಿಗಳನ್ನು ಹಾಗೂ ಔಷಧಿಗಳನ್ನು ಸರಬರಾಜು ಮಾಡಬೇಕು, ಸಂತ್ರಸ್ತ ಕುಟುಂಬದವರಿಗೆ ಸೂಕ್ತ ಪರಿಹಾರ ವಿತರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಕೊಳಗಲ್ಲ ಮಲ್ಲಪ್ಪ, ಈರಣ್ಣ, ಮುಕ್ಕಣ್ಣ, ಕಲ್ಯಾಣ ಗೌಡ, ವಿರೇಶ್, ಮಾರೇಶ್, ವಿಶ್ವನಾಥ ಸ್ವಾಮೀ, ಅಡಿವೆಪ್ಪ, ಸೇರಿದಂತೆ ಎಐವೈಎಫ್ ಹಾಗೂ ಸಿಪಿಐ ಕಾರ್ಯಕರ್ತರು ಭಾಗವಹಿಸಿದ್ದರು.