ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಲು ಆಗ್ರಹ; ಡಿಎಸ್ ಎಸ್ ಪ್ರತಿಭಟನೆ 

ಸಂಜೆವಾಣಿ ವಾರ್ತೆ

ದಾವಣಗೆರೆ.ಜು.೨೭; ಜನಾಂಗೀಯ ಸಂಘರ್ಷ ಮತ್ತು ಹಿಂಸಾಚಾರದಿಂದ ನಲುಗಿ ಹೋಗಿರುವ ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿರುವ ಮುಖ್ಯಮಂತ್ರಿ ಬೀರೇನ್ ಸಿಂಗ್ ಸರ್ಕಾರವನ್ನು ವಜಾಗೊಳಿಸಿ ರಾಷ್ಟçಪತಿ ಆಡಳಿತ ಜಾರಿ ಮಾಡುವಂತೆ ಒತ್ತಾಯಿಸಿ ಡಿಎಸ್ ಎಸ್ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.ಈ ವೇಳೆ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ್ ಮಾತನಾಡಿ ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಮೂರು ತಿಂಗಳುಗಳ ಹಿಂದೆ ಜನಾಂಗೀಯ ಸಂಘರ್ಷ ಮತ್ತು ಹಿಂಸಾಚಾರದಿಂದ ನಲುಗಿ ಹೋಗಿದೆ. ಕುಕಿ ಜೋ ಬುಡಕಟ್ಟು ಸಮುದಾಯದ ಇಬ್ಬರು ಮಹಿಳೆಯರನ್ನು ಸಂಪೂರ್ಣ ಬೆತ್ತಲು ಮಾಡಿ ಅವರ ಮೇಲೆ ಗುಂಪೊಂದು ಲೈಂಗಿಕ ದೌರ್ಜನ್ಯ ನಡೆಸಿದ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಇದು ಮಣಿಪುರ ಹಿಂಸಾಚಾರದ ಆಘಾತಕಾರಿ ಮುಖವನ್ನು ತೆರೆದಿಟ್ಟಿದೆ. ಹಿಂಸಾಚಾರದ ಕರಾಳ ಮುಖವನ್ನು ಇಡೀ ದೇಶಕ್ಕೆ ತೋರಿಸಿದೆ. ಮಹಿಳೆಯರಿಗೆ ಯಾವ ಮಟ್ಟದ ಅವಮಾನ ಮಾಡುವುದಕ್ಕೂ ಹೇಸದ ಮನಸ್ಥಿತಿ, ಪೊಲೀಸರು ಮತ್ತು ಅಧಿಕಾರ ಸ್ಥಾನದಲ್ಲಿರುವವರ ಅಸಡ್ಡೆ, ಹಿಂಸೆಗೆ ನೀಡಿದ ಕುಮ್ಮಕ್ಕು, ಮಧ್ಯ ಪ್ರವೇಶ ಮಾಡಲು ಕೇಂದ್ರ ಸರ್ಕಾರದ ಹಿಂದೇಟು ಮತ್ತು ಎಲ್ಲಕ್ಕಿಂತ ಮಾನವೀಯತೆಯನ್ನೇ ಮರೆತಿರುವ ಸ್ಥಿತಿ ಎಲ್ಲದಕ್ಕೂ ಈ ವಿಡಿಯೋ ಕನ್ನಡಿ ಹಿಡಿದಿದೆ. ಈ ಕೃತ್ಯವು ಮಣಿಪುರ ಮಾತ್ರವಲ್ಲ ಇಡೀ ದೇಶ ಬೆಚ್ಚಿ ಬೀಳಿಸುವಂತೆ ಮಾಡಿದ ಈ ಘಟನೆಯ ಪೂರ್ಣ ಹೊಣೆಗಾರಿಕೆಯನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳೇ ಹೊತ್ತುಕೊಳ್ಳಬೇಕು. ಮಹಿಳೆಯರನ್ನು ಸಂಪೂರ್ಣ ಬೆತ್ತಲುಗೊಳಿಸಿ ಸಾರ್ವಜನಿಕವಾಗಿ ಮೆರವಣಿಗೆ ಮಾಡಿ, ಸಾಮೂಹಿಕ ಅತ್ಯಾಚಾರ ಮಾಡಿರುವ ದುಷ್ಕರ್ಮಿಗಳಿಗೆ ತಕ್ಷಣವೇ ಗಲ್ಲು ಶಿಕ್ಷೆಗೊಳಪಡಿಸಬೇಕು.  ಮಣಿಪುರದ ಸಿಎಂ ಬೀರೇನ್ ಸಿಂಗ್ ನೇತೃತ್ವದ ಸರ್ಕಾರವನ್ನು ತಕ್ಷಣವೇ ವಜಾಗೊಳಿಸಿ ರಾಷ್ಟçಪತಿಯವರ ಆಡಳಿತವನ್ನು ಜಾರಿ ಮಾಡಬೇಕೆಂದು ಒತ್ತಾಯಿಸಿದರು.