ಮಣಿಪುರದಲ್ಲಿ ಮೀಸಲಾತಿ ಹಿಂಸಾಚಾರ


ನವದೆಹಲಿ.ಇಂಫಾಲ್‌ಮೇ೪:ಈಶಾನ್ಯ ಭಾಗದ ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಬುಡಕಟ್ಟು ಜನಾಂಗದ ಆಂದೋಲನದ ಸಂದರ್ಭದಲ್ಲಿ ಈ ಹಿಂಸಾಚಾರ ಉಂಟಾಗಿದ್ದು, ಹಲವೆಡೆ ಬೆಂಕಿ ಹಚ್ಚಲಾಗಿದೆ. ಈಗಾಗಲೇ ಭದ್ರತೆ ಮತ್ತು ಪರಿಹಾರ ಕಾರ್ಯಕ್ಕಾಗಿ ಭದ್ರತಾ ಪಡೆಗಳನ್ನು ರವಾನಿಸಲಾಗಿದೆ.
ಜೊತೆಗೆ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿ ಪರಿಸ್ಥಿತಿ ಅಲೋಕಿಸಿದ್ದಾರೆ.
ಇಂಫಾಲ್ ಕಣಿವೆಯಲ್ಲಿ ಪ್ರಾಬಲ್ಯ ಹೊಂದಿರುವ ಬುಡಕಟ್ಟು ಜನಾಂಗವಲ್ಲದ ಮೈಟೀಸ್ ಸಮುದಾಯದ ಪರಿಶಿಷ್ಟ ಪಂಗಡ (ಎಸ್‌ಟಿ) ಸ್ಥಾನಮಾನಕ್ಕಾಗಿ ಬೇಡಿಕೆ ವಿವಾದಕ್ಕೆ ಕಾರಣವಾಗಿದೆ.
ಈ ಬೇಡಿಕೆಯನ್ನು ವಿರೋಧಿಸಿ ಚುರಾಚಂದ್‌ಪುರ ಜಿಲ್ಲೆಯ ಟೊರ್ಬಂಗ್ ಪ್ರದೇಶದಲ್ಲಿ ಅಖಿಲ ಬುಡಕಟ್ಟು ವಿದ್ಯಾರ್ಥಿ ಸಂಘ (ಎಟಿಎಸ್‌ಯುಎಂ)ವು ಬುಧವಾರ ಪ್ರತಿಭಟನೆಗೆ ಕರೆ ನೀಡಿತ್ತು. ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಎರಡು ಕಡೆಯ ಜನಾಂಗಗಳ ನಡುವೆ ಘರ್ಷಣೆಗಳು ಭುಗಿಲೆದ್ದಿವೆ. ಆಗ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹಲವಾರು ಸುತ್ತಿನ ಅಶ್ರುವಾಯು ಪ್ರಯೋಗಿಸಿದ್ದಾರೆ.
ಆದರೆ, ಇದರ ನಂತರದಲ್ಲಿ ಹಿಂಸಾಚಾರವು ಮಣಿಪುರದ ಇತರ ಭಾಗಗಳಿಗೆ ಹರಡಿದ್ದು, ಕೆಲವು ಭಾಗಗಳು ಬೆಂಕಿಯಿಂದ ಇಡೀ ರಾತ್ರಿ ಹೊತ್ತಿ ಉರಿದಿವೆ. ಇದೇ ವೇಳೆ, ಹಿಂಸಾಚಾರ ಪೀಡಿತ ಸ್ಥಳಗಳಿಂದ ಎಲ್ಲ ಸಮುದಾಯಗಳ ೭,೫೦೦ಕ್ಕೂ ಹೆಚ್ಚು ಜನರನ್ನು ರಾತ್ರಿಯಿಡೀ ಸ್ಥಳಾಂತರ ಮಾಡಲಾಗಿದೆ. ಪರಿಸ್ಥಿತಿ ಹತೋಟಿಗೆ ತರಲು ಮಣಿಪುರ ಪೊಲೀಸ್? ಪಡೆಗಳೊಂದಿಗೆ ಭಾರತೀಯ ಸೇನೆ ಮತ್ತು ಅಸ್ಸಾಂ ರೈಫಲ್ಸ್ ಪಡೆಗಳು ಈಗಾಗಲೇ ಸ್ಥಳಕ್ಕೆ ದೌಡಾಯಿಸಿವೆ. ಸಿಆರ್‌ಪಿಎಫ್‌ನ ಸುಮಾರು ೧೫ ತುಕಡಿಗಳು ಭದ್ರತೆಗೆ ನಿಯೋಜಿಸಲಾಗಿದೆ. ಜೊತೆಗೆ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ನಿಯೋಜನೆಗಾಗಿ ಕ್ಷಿಪ್ರ ಕಾರ್ಯಪಡೆ (ಆರ್‌ಎಎಫ್)ಯ ಐದು ತುಕಡಿಗಳನ್ನು ಸಹ ಕಳುಹಿಸಲಾಗಿದೆ. ಇತರ ೧೫ ಆರ್‌ಎಎಫ್ ತುಕಡಿಗಳಿಗೆ ಸನ್ನದ್ಧ ಸ್ಥಿತಿಯಲ್ಲಿರಲು ಸೂಚಿಸಲಾಗಿದೆ.