ಮಣಿಪುರಕ್ಕೆ ಸರ್ವಪಕ್ಷ ನಿಯೋಗ ಭೇಟಿಗೆ ರಂಜನ್ ಆಗ್ರಹ

ನವದೆಹಲಿ,ಜು.೩೧- ಹಿಂಸಾಚಾರ ಪೀಡಿತ ಮಣಿಪುರಕ್ಕೆ ಸರ್ವಪಕ್ಷಗಳ ನಿಯೋಗ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ವಿಶ್ಲೇಷಿಸಬೇಕು ಎಂದು ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಇಂದಿಲ್ಲಿ ಒತ್ತಾಯಿಸಿದ್ದಾರೆ.
“ಸರ್ವಪಕ್ಷ ನಿಯೋಗ ಮಣಿಪುರಕ್ಕೆ ಭೇಟಿ ನೀಡಿ ಅಲ್ಲಿನ ವಾಸ್ತವ ಸ್ಥಿತಿ ಅರಿಯಬೇಕಾಗಿದೆ. ಬಿಹಾರ ಮತ್ತು ಪಶ್ಚಿಮ ಬಂಗಾಳದ ಬಗ್ಗೆಯೂ ನಾವು ಚರ್ಚೆಗೆ ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.
ಮಣಿಪುರ ವಿಷಯದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಣಿಪುರ ವಿಷಯದಲ್ಲಿ ಮೌನವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯವನ್ನು ತಂದಿದ್ದೇವೆ ಮತ್ತು ಸರ್ಕಾರವು ಆದಷ್ಟು ಬೇಗ ಅದರ ಬಗ್ಗೆ ಚರ್ಚೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ
ಇತರ ವಿಷಯಗಳ ಬಗ್ಗೆ ಚರ್ಚಿಸಲು ನಮಗೆ ಯಾವುದೇ ಸಮಸ್ಯೆ ಇಲ್ಲ ಆದರೆ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯವನ್ನು ಚರ್ಚಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.
ಈ ತಿಂಗಳ ೨೦ ರಂದು ಆರಂಭವಾದ ಸಂಸತ್ತಿನ ಮುಂಗಾರು ಅಧಿವೇಶನ ಒಂದೇ ಒಂದು ದಿನವೂ ಸುಗಮವಾಗಿ ನಡೆದಿಲ್ಲ.
ಮಣಿಪುರ ವಿಷಯದ ಬಗ್ಗೆ ಸಂಸತ್ತಿನಲ್ಲಿ ಮಾತನಾಡಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸುವ ಅವಿಶ್ವಾಸ ನಿರ್ಣಯ ಈ ವಾರ ಸದನ ಕೈಗೆತ್ತಿಕೊಳ್ಳಬೇಕು ಎಂದಿದ್ದಾರೆ.
ಸಂಸತ್ತಿನ ಮುಂಗಾರು ಅಧಿವೇಶನದ ಕಾರ್ಯಚಟುವಟಿಕೆಯು ಜುಲೈ ೨೦ ರಂದು ಪ್ರಾರಂಭವಾದಾಗಿನಿಂದ ಮಣಿಪುರ ಹಿಂಸಾಚಾರದ ವಿಷಯ ಚರ್ಚೆಗೆ ವಿಪಕ್ಷಗಳು ಪಟ್ಟು ಹಿಡಿದು ಕಲಾಪಕ್ಕೆ ಅಡ್ಡಿಪಡಿಸಿವೆ.
ಎರಡು ದಿನಗಳ ಕಾಲ ಮಣಿಪುರಕ್ಕೆ ೧೬ ವಿವಿಧ ಪಕ್ಷಗಳ ೨೧ ಸದಸ್ಯರು ಭೇಟಿ ಮಾಡಿ ಅಲ್ಲಿನ ಪರಿಸ್ಥಿತಿಯನ್ನು ವರದಿ ರೂಪದಲ್ಲಿ ರಾಜ್ಯಪಾಲರಿಗೆ ನೀಡಿ ರಾಜ್ಯದಲ್ಲಿ ಶಾಂತಿ ಕಾಪಾಡಲು ಹೆಚ್ಚಿನ ಒತ್ತು ನೀಡುವಂತೆ ನಿಯೋಗ ಮನವಿ ಮಾಡಿದೆ.