ಮಣಿಪುರಕ್ಕೆ ರಾಹುಲ್ ಕೈ-ಕಮಲ ವಾಕ್ಸಮರ

ನವದೆಹಲಿ,ಜೂ.೩೦- ಹಿಂಸಾಚಾರ ಪೀಡಿತ ಮಣಿಪುರದ ಜನರ ಕಷ್ಟ ಆಲಿಸಲು ತೆರಳಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ನಡೆಯನ್ನು ನಾಟಕ ಎಂದು ಕರೆದಿರುವ ಬಿಜೆಪಿ ಹೇಳಿಕೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮಣಿಪುರಕ್ಕೆ ಹೋಗಬಹುದು,ಆದರೆ ವಿರೋಧ ಪಕ್ಷದ ನಾಯಕರು ಅಲ್ಲಿಗೆ ಹೋದರೆ ಅಡ್ಡಿ ಪಡಿಸುವುದು ನಾಟಕ ಎಂದು ಕರೆಯುವುದು ಹೊಟ್ಟೆಕಿಚ್ಚಿನ ಸ್ವಭಾವದವರು, ಜೊತೆಗೆ ಅಸೂಯೆಯಿಂದ ಕೂಡಿದ ಮನಸ್ಥಿತಿ ಬಿಜೆಪಿಯದು ಎಂದು ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ಮತ್ತು ಅದರ ನಾಯಕರು ಅಸೂಯೆಯಿಂದಲೇ ತುಂಬಿ ತುಳುಕಾಡುತ್ತಿದ್ದಾರೆ. ಇಂತಹ ಮನಸ್ಥಿತಿ ಒಳ್ಳೆಯದಲ್ಲ ಎಂದು ಅವರು ತಿಳಿಸಿದ್ದಾರೆ.ರಾಹುಲ್ ಗಾಂಧಿ ಮಣಿಪುರ ಜನರ ನೋವು ಅರ್ಥ ಮಾಡಿಕೊಳ್ಳಲು ಹೋದರೆ ನಾಟಕ ಎನ್ನುವುದು, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರತಿ ಪಕ್ಷಗಳು ಒಗ್ಗೂಡಿ ಸಭೆ ನಡೆಸಿದರೆ ಫೋಟೋ ಸೆಷನ್ ಎನ್ನುವುದು ಬಿಜೆಪಿ ನಾಯಕರ ಕೊಳಕು ಮನಸ್ಥಿತಿ ಬಿಂಬಿಸಲಿದೆ ಎಂದು ಅವರು ಹೇಳಿದ್ದಾರೆ.ಬಿಜೆಪಿ ನಾಯಕರದ್ದು ಸರ್ವಾಧಿಕಾರ ಮನೋಭಾವನೆಯಿಂದ ಕೂಡಿದೆ. ಈ ರೀತಿಯ ಮನೋಭಾವನೆ ಮತ್ತು ಅಸೂಯೆ ಒಳ್ಳೆಯದಲ್ಲ. ರಾಜಕೀಯ ಮಾಡುವುದು ಸರಿಯಲ್ಲ ಎಂದು ಕಿಡಿ ಕಾರಿದ್ದಾರೆ.ವಿರೋಧ ಪಕ್ಷದ ನಾಯಕರ ಸಭೆಯನ್ನು ಫೋಟೋ ಸೆಶನ್ ಎಂದು ಕರೆಯುವುದನ್ನು ನೋಡಿದರೆ ಬಿಜೆಪಿ ನಾಯಕರು ಪ್ರಜಾಪ್ರಭುತ್ವದ ಮನಸ್ಥಿತಿಯವರಲ್ಲ. ಬದಲಾಗಿ ಸರ್ವಾಧಿಕಾರದ ಮನಸ್ಥಿತಿಯಲ್ಲಿದ್ದಾರೆ…ಅಂತಹ ಮನಸ್ಥಿತಿಯನ್ನು ಖಂಡಿಸುವುದಾಗಿ ತಿಳಿಸಿದ್ಧಾರೆ.