
ಕಲಬುರಗಿ,ಆ.23-ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಸಂದೇಶ ಪ್ರಚಾರ ಮಾಡಿದ ಆರೋಪದ ಮೇಲೆ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅವರನ್ನು ಮಾಡಬೂಳ್ ಪೊಲೀಸರು ಇಂದು ಬಂಧಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಸಂದೇಶ ಪ್ರಚಾರ ಮಾಡಿದ ಆರೋಪದ ಮೇಲೆ ಚಿತ್ತಾಪುರ ತಾಲ್ಲೂಕಿನ ಮಾಡಬೂಳ ಪೊಲೀಸ್ ಠಾಣೆಯಲ್ಲಿ ಮಣಿಕಂಠ ರಾಠೋಡ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ಈ ಹಿನ್ನೆಲೆಯಲ್ಲಿ ಮಾಡಬೂಳ ಪೊಲೀಸರು ಇಂದು ನಗರಕ್ಕೆ ಆಗಮಿಸಿ ನಗರದ ಅಪಾರ್ಟ್‍ಮೆಂಟ್ ಒಂದರಲ್ಲಿ ಇದ್ದ ಮಣಿಕಂಠ ರಾಠೋಡ್ ಅವರನ್ನು ಮಾಡಬೂಳ ಪೊಲೀಸರು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ.
ಚಿತ್ತಾಪುರ ತಾಲ್ಲೂಕಿನ ಕಲಗುರ್ತಿ ಗ್ರಾಮದ ದೇವಾನಂದ ರಾಮಚಂದ್ರ ಕೊರಬಾ ಸಾವಿಗೆ ಸಂಬಂಧಿಸಿದಂತೆ ಮತ್ತು ಈ ಸಾವಿನ ಹಿಂದೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಬೆಂಬಲಿಗರಿದ್ದಾರೆ. ಹೀಗಾಗಿ ಆರೋಪಿಗಳನ್ನು ಪೊಲೀಸರು ಬಂಧಿಸುತ್ತಿಲ್ಲ ಎಂದು ಮಣಿಕಂಠ ರಾಠೋಡ್ ಆರೋಪಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ತಪ್ಪು ಸಂದೇಶ ಹರಿಬಿಟ್ಟ ಹಿನ್ನೆಲೆಯಲ್ಲಿ ಅವರ ವಿರುದ್ಧ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿ ಕರೆದೊಯ್ಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಲ್ಲದೆ ಚಿತ್ತಾಪುರ ತಾಲ್ಲೂಕಿನ ಕಲಗುರ್ತಿ ಗ್ರಾಮದ ದೇವಾನಂದ ರಾಮಚಂದ್ರ ಕೊರಬಾ ಅವರ ಸಾವಿನ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸದೆ ಪೊಲೀಸ್ ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ ಎಂದು ಆರೋಪಿಸಿ ಮಣಿಕಂಠ ರಾಠೋಡ್ ಅವರು ಚಿತ್ತಾಪುರ ಪಟ್ಟಣದಲ್ಲಿಂದು ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಚಿತ್ತಾಪುರ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.