
ಕಲಬುರಗಿ,ಆ 26: ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅವರನ್ನು ಚಿತ್ತಾಪುರ ತಾಲೂಕಿನ ಮಾಡಬೂಳ ಪೊಲೀಸರು ಶುಕ್ರವಾರ ಮತ್ತೆ ಬಂಧಿಸಿದ್ದು,14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮಾಡಬೂಳ ಠಾಣೆಯಲ್ಲಿ ಈ ಹಿಂದೆ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆ.25 ರಂದು ಹಾಜರಾಗುವಂತೆ ಪೊಲೀಸರು ಸೂಚನೆ ನೀಡಿದ್ದರು.ಅದರಂತೆ ಮಾಡಬೂಳ ಠಾಣೆಗೆ ತೆರಳಿದಾಗ ಬಂಧಿಸಲಾಗಿದೆ.ನಂತರ ಚಿತ್ತಾಪುರದ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.ತಡರಾತ್ರಿಯ ವರೆಗೆ ವಿಚಾರಣೆ ನಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.
ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶ,ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅಪಪ್ರಚಾರ ಆರೋಪ ಹಿನ್ನೆಲೆಯಲ್ಲಿ ಮಾಡಬೂಳ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153 ಎ, 505 (1) ಬಿ ಅಡಿ ಪ್ರಕರಣ ದಾಖಲಾಗಿತ್ತು.ಈ ದೂರಿನ ಅನ್ವಯ ಬುಧವಾರ ಬಂಧನ ಮಾಡಿ ಸ್ಪೇಷಲ್ ಬೇಲ್ ಮೇಲೆ ಬಿಡುಗಡೆ ಮಾಡಲಾಗಿತ್ತು.
ಅದೇ ಪ್ರಕರಣದಲ್ಲಿ ಶುಕ್ರವಾರ ಠಾಣೆಗೆ ಬಂದಾಗ ಪೊಲೀಸರು ಬಂಧಿಸಿದ್ದಾರೆ.ಬುಧವಾರ ಸ್ಪೇಷಲ್ ಬೇಲ್ ಮೇಲೆ ಬಿಡುಗಡೆ ಮಾಡುವಾಗ ವಿಧಿಸಿದ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಬಂಧಿಸಲಾಗಿದೆ.