ಮಡೋನಾ ಹಿರಿಯ ಸಹೋದರ ನಿಧನ

ನ್ಯೂಯಾರ್ಕ್, ಫೆ.೨೭- ಅಮೆರಿಕಾದ ಖ್ಯಾತ ಗೀತರಚನೆಗಾರ್ತಿ, ಹಾಡುಗಾರ್ತಿ ಹಾಗೂ ನಟಿ ಮಡೋನಾ ಅವರ ಹಿರಿಯ ಸಹೋದರ ಆಂಥೋನಿ ಸಿಕ್ಕೋನ್ (೬೬) ನಿಧನರಾಗಿದ್ದಾರೆ. ಸಾವಿನ ಸುದ್ದಿಯನ್ನು ಮಡೋನಾ ಅವರ ಕುಟುಂಬದ ಸದಸ್ಯರು ಘೋಷಿಸಿದ್ದಾರೆ.
ಮಡೋನಾ ಅವರ ಏಳು ಮಂದಿ ಒಡಹುಟ್ಟಿದವರಲ್ಲಿ ಸಿಕ್ಕೋನ್ ಕೂಡ ಒಬ್ಬರಾಗಿದ್ದು, ಶುಕ್ರವಾರ ತಡರಾತ್ರಿ ಮೃತಪಟ್ಟಿದ್ದರು ಎನ್ನಲಾಗಿದೆ. ಆದರೆ ಸಾವಿನ ಕಾರಣ ಇನ್ನೂ ಬಹಿರಂಗವಾಗಿಲ್ಲ. ಅವರು ತೀವ್ರ ರೀತಿಯಲ್ಲಿ ಮದ್ಯಪಾನದ ಚಟ ಹೊಂದಿದ್ದು, ಅನೇಕ ವರ್ಷಗಳಿಂದ ನಿರಾಶ್ರಿತರಾಗಿದ್ದರು. ಒಂದು ಹಂತದಲ್ಲಿ ಸೂಕ್ತ ರೀತಿಯಲ್ಲಿ ಆಶ್ರಯದ ವ್ಯವಸ್ಥೆ ಇಲ್ಲದೆ ಸೇತುವೆಯ ಕೆಳಗೆ ವಾಸಿಸುತ್ತಿದ್ದರು ಎನ್ನಲಾಗಿದೆ. ಸಹೋದರನ ನಿಧನದ ಬಗ್ಗೆ ಮಡೋನಾ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.
ಇನ್ನು ಮಡೋನಾ ಮಿಚಿಗನ್‌ನ ಡೆಟ್ರಾಯಿಟ್ ನಗರದಲ್ಲಿ ಸಹೋದರ ಆಂಥೋನಿ ಸಿಕ್ಕೋನ್ ಮತ್ತು ಇತರ ಒಡಹುಟ್ಟಿದವರೊಂದಿಗೆ ಬೆಳೆದರು. ಆದರೆ ೧೯೬೩ರಲ್ಲಿ ಸ್ತನ ಕ್ಯಾನ್ಸರ್ ಹಿನ್ನೆಲೆಯಲ್ಲಿ ಮಡೋನಾ ತಮ್ಮ ತಾಯಿಯನ್ನು ಕಳಕೊಂಡರು. ಬಳಿಕ ನೃತ್ಯ ಮತ್ತು ಸಂಗೀತದಲ್ಲಿ ವೃತ್ತಿಜೀವನವನ್ನು ಮುಂದುವರಿಸುವ ಸಲುವಾಗಿ ಮಡೋನಾ ಅವರು ೧೯೭೮ ರಲ್ಲಿ ನ್ಯೂಯಾರ್ಕ್‌ಗೆ ತೆರಳಿದರು. ಈ ವೇಳೆ ಸಿಕ್ಕೋನ್ ಮಿಚಿಗನ್‌ನಲ್ಲಿಯೇ ಉಳಿದುಕೊಂಡಿದ್ದರು.