ಮಡಿವಂತಿಕೆಯ ಸಮಾಜವನ್ನು ದಿಕ್ಕರಿಸಿದ ನಿಜಶರಣ ಅಂಬಿಗರ ಚೌಡಯ್ಯ – ಹುಲಿರಾಜಪ್ಪ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜ. 22 :- ನೇರ ನಡೆನುಡಿಯ ಮೂಲಕ 12ನೇ ಶತಮಾನದಲ್ಲಿದ್ದ ಮಡಿವಂತಿಕೆಯ ಸಮಾಜವನ್ನು ದಿಕ್ಕರಿಸಿದ ಏಕೈಕ ನಿಜಶರಣ ಅಂಬಿಗರ ಚೌಡಯ್ಯ ಎಂದು ಕೂಡ್ಲಿಗಿ ತಾಲೂಕು ಗಂಗಾಮತಸ್ಥ ಸಮಾಜದ ಅಧ್ಯಕ್ಷ ಹುಲಿರಾಜಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ನಿನ್ನೆ  ಬೆಳಿಗ್ಗೆ ಜರುಗಿದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತ ಅಂಬಿಗರ ಚೌಡಯ್ಯನವರು ನೇರ ನಡೆನುಡಿಯ ನಿಜಶರಣರಾಗಿದ್ದು ಅವರು ವಚನಗಳ  ಮೂಲಕ ಸಮಾಜದ ಮೌಢ್ಯತೆ ತೊಡೆದುಹಾಕುವಲ್ಲಿ ಶ್ರಮಿಸಿದ ಏಕೈಕರು  ಎಂದರೆ ತಪ್ಪಾಗದು ಹಾಗೂ ಮಡಿವಂತಿಕೆ ಸಮಾಜವು   ವಚನಗಳನ್ನು  ಸುಟ್ಟುಹಾಕಲು ಮುಂದಾದಾಗ ವಚನಗಳ ಗಂಟನ್ನು ಬೆನ್ನಿಗೆ ಕಟ್ಟಿಕೊಂಡು ಖಡ್ಗ ಹಿಡಿದು ಹೋರಾಟವನ್ನು ಬಸವಣ್ಣನವರ ಜೊತೆ ಸೇರಿ ಕಲ್ಯಾಣ ಕ್ರಾಂತಿ ನಡೆಸಿ ಕಾಡು, ಗುಹೆಗಳಲ್ಲಿ ಬಚ್ಚಿಡುವ ಮೂಲಕ ವಚನಗಳನ್ನು ಮುಂದಿನ ಪೀಳಿಗೆಗೆ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವಲ್ಲಿ ಅಂಬಿಗರ ಚೌಡಯ್ಯನವರ ಪಾತ್ರ ಹಿರಿದಾಗಿದೆ ಎಂದು ಹುಲಿರಾಜು ತಿಳಿಸಿದರು.
ತಹಸೀಲ್ದಾರ್ ಕಚೇರಿಯ ಈಶಪ್ಪ ಮಾತನಾಡಿ ನಿಜಶರಣ ಅಂಬಿಗರ ಚೌಡಯ್ಯ ಅವರ ವಚನಸಾಹಿತ್ಯಗಳು ಇಂದಿಗೂ ಮಲಗಿದ್ದವರನ್ನು ಬಡಿದೆಚ್ಚರಿಸುತ್ತವೆ ಅವರ ನೇರ ನುಡಿ ನಮಗೆಲ್ಲ ಆದರ್ಶವಾಗಿವೆ ಎಂದರು.
ಈ ಸಂದರ್ಭದಲ್ಲಿ ಕೂಡ್ಲಿಗಿ ಗ್ರೇಡ್ -2 ತಹಸೀಲ್ದಾರ್ ಅರುಂಧತಿ ನಾಗಾವಿ, ಗಂಗಾಮತ ಸಮಾಜದ ಜಿಲ್ಲಾ ಕಾರ್ಯಕಾರಿ ಸಮಿತಿಯ ಪ್ರಕಾಶ, ಬೇಕರಿ ಸುರೇಶ, ತಾಲೂಕು ಪದಾಧಿಕಾರಿಗಳಾದ ಕುಬೇರಪ್ಪ, ಗೋವಿಂದಪ್ಪ, ನಾಗರಾಜ, ಉಮೇಶ, ಪವನ, ಹೊನ್ನೂರಪ್ಪ, ವಿಜಯಲಕ್ಷ್ಮಿ, ಶಿಕ್ಷಕ ತಿಂದಪ್ಪ ಹಾಗೂ ಇತರರು ಉಪಸ್ಥಿತರಿದ್ದರು.