ಮಠ-ಮಾನ್ಯಗಳು ಶಾಂತಿ-ನೆಮ್ಮದಿಯ ಕೇಂದ್ರಗಳು

ಹೊನ್ನಾಳಿ.ಜ.೫; ಮಠ-ಮಾನ್ಯಗಳು ಶಾಂತಿ-ನೆಮ್ಮದಿಯ ಕೇಂದ್ರಗಳು ಎಂದು ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.ತಾಲೂಕಿನ ಮಾಸಡಿ ಗ್ರಾಮದಲ್ಲಿ  ಶ್ರೀ ಮಹೇಶ್ವರಸ್ವಾಮಿ ಮಠವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಮನುಷ್ಯ ಅಗಾಧ ಸಾಧನೆ ಮಾಡಿದ್ದಾನೆ. ಆದರೆ, ತನ್ನ ಬದುಕಿನಲ್ಲಿ ಶಾಂತಿ-ನೆಮ್ಮದಿ ಕಂಡುಕೊಳ್ಳಲು ವಿಫಲನಾಗಿದ್ದಾನೆ. ಆದ್ದರಿಂದ, ಧಾರ್ಮಿಕ ಶ್ರದ್ಧಾ ಕೇಂದ್ರಗಳು, ದೇವಸ್ಥಾನಗಳು, ಗುರುಗಳ ಸನ್ನಿಧಿಗೆ ತೆರಳಿ ಮನಸ್ಸಿಗೆ ನೆಮ್ಮದಿ ಕಂಡುಕೊಳ್ಳಬೇಕು ಎಂದು ತಿಳಿಸಿದರು.ಮಾಸಡಿ ಗ್ರಾಮದ ವತಿಯಿಂದ ಶ್ರೀ ಮಹೇಶ್ವರ ಸ್ವಾಮಿ ಜಾತ್ರೆಯನ್ನು ಶ್ರದ್ಧಾ-ಭಕ್ತಿಗಳಿಂದ ಆಚರಿಸಲಾಗುತ್ತದೆ. ಸುತ್ತ-ಮುತ್ತಲಿನ ಗ್ರಾಮಸ್ಥರೆಲ್ಲರೂ ಇಲ್ಲಿಗೆ ಆಗಮಿಸಿ, ಶಿವನ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಗ್ರಾಮದಲ್ಲಿದ್ದ ಮಹೇಶ್ವರಸ್ವಾಮಿ ಹಳೆಯ ಮಠದ ಬದಲಿಗೆ ಹೊಸ ಮಠವನ್ನು ಗ್ರಾಮಸ್ಥರೆಲ್ಲರೂ ಒಗ್ಗಟ್ಟಿನಿಂದ ನಿರ್ಮಿಸಿರುವುದು ಗ್ರಾಮದ ಐಕ್ಯತೆಯನ್ನು ಬಿಂಬಿಸುತ್ತದೆ. ಇದೇ ರೀತಿ ಎಲ್ಲಾ ಗ್ರಾಮಸ್ಥರೂ ಭಾವೈಕ್ಯತೆಯಿಂದ ಬಾಳ್ವೆ ನಡೆಸಬೇಕು ಎಂದು ಸೂಚಿಸಿದರು.ಶ್ರೀ ಮಹೇಶ್ವರಸ್ವಾಮಿ ಮಠ ಮಹೇಶ್ವರಯ್ಯ ಸ್ವಾಮಿ, ಎಪಿಎಂಸಿ ನಿರ್ದೇಶಕ ಎಂ.ಎಚ್. ಗಜೇಂದ್ರಪ್ಪ, ಮಾಸಡಿ ಗ್ರಾಪಂ ಸದಸ್ಯರಾದ ಸಿ.ಎಚ್. ಅಶೋಕ್, ಮಮತಾ ಎನ್.ಪಿ. ನಾಗಪ್ಪ, ಲಕ್ಷö್ಮಮ್ಮ ಭರಮಪ್ಪ, ನೇತ್ರಾವತಿ ನಾಗರಾಜ್, ಮುಖಂಡರಾದ ಪಿ. ಗದಿಗೆಪ್ಪ, ನಾರಾಯಣಪ್ಪ, ಸತೀಶ್, ಕೆ.ಟಿ. ಸುರೇಶ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.