ಮಠಾಧೀಶರ ಮೊರೆ-ಯತ್ನಾಳ್ ಕಿಡಿ

ಬೆಂಗಳೂರು, ಮೇ ೧- ಸಮಯ ಸಿಕ್ಕಾಗಲೆಲ್ಲಾ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ. ವಿಜಯೇಂದ್ರ ವಿರುದ್ಧ ಕಟು ಟೀಕೆಗಳನ್ನು ನಡೆಸುತ್ತಿರುವ ಬಿಜೆಪಿ ಶಾಸಕ ಬಸನಗೌಡಪಾಟೀಲ್ ಯತ್ನಾಳ್, ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಕುರ್ಚಿ ಉಳಿಸಿಕೊಳ್ಳಲು ವೀರಶೈವ ಲಿಂಗಾಯತ ಮಠಾಧೀಶರ ಮೊರೆ ಹೋಗಿರುವುದಕ್ಕೆ ಯತ್ನಾಳ್ ಕಿಡಿಕಾರಿದ್ದಾರೆ.
ಈ ಬಗ್ಗೆ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಅವರು, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆಗಳು ಮುನ್ನಲೆಗೆ ಬರುತ್ತಿದ್ದಂತೆಯೇ ತಮ್ಮ ಕುರ್ಚಿ ಉಳಿಸಿಕೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ಮಠಾಧೀಶರ ಬೆಂಬಲ ಪಡೆಯುವ ಪ್ರಯತ್ನ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ವೀರಶೈವ ಲಿಂಗಾಯತ ಮಠಾಧೀಶರು ಇವರ ಬೆಂಬಲಕ್ಕೆ ನಿಲ್ಲದಂತೆ ಅವರು ಮನವಿ ಮಾಡಿದ್ದಾರೆ.
ವೀರಶೈವ ಲಿಂಗಾಯತ ಸಮುದಾಯದ ಬೆಂಬಲ ಹಾಗೂ ಒಲವಿನಿಂದ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿರುವ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಮಠಾಧೀಶರುಗಳಿಗೆ ಅವಮಾನ ಮಾಡಿ ಅವರನ್ನು ನಿರ್ಲಕ್ಷಿಸಿದ್ದಾರೆ. ಈಗ ಕುರ್ಚಿ ಉಳಿಸಿಕೊಳ್ಳಲು ಅವರಿಗೆ ಮಠಾಧೀಶರ ನೆನಪಾಗಿದೆ. ದಯಮಾಡಿ ಯಾವುದೇ ಮಠಾಧೀಶರು ಇವರ ಬೆಂಬಲಕ್ಕೆ ನಿಲ್ಲುವಂತಹ ಹೇಳಿಕೆಗಳನ್ನು ಕೊಡಬೇಡಿ ಎಂದು ಯತ್ನಾಳ್ ಫೇಸ್‌ಬುಕ್‌ನಲ್ಲಿ ವೀರಶೈವ ಲಿಂಗಾಯತ ಮಠಾಧೀಶರುಗಳಿಗೆ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಪುತ್ರ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಇಂತಹವರಿಗೆ ಬೆಂಬಲ ನೀಡುವುದು ಬಸವವಾದಿ ಶರಣರ ತತ್ವಗಳಿಗೆ ವಿರುದ್ಧವಾದದ್ದು. ದಯಮಾಡಿ ಯಡಿಯೂರಪ್ಪನವರನ್ನು ಬೆಂಬಲಿಸಿ ಮಾತನಾಡಬೇಡಿ ಎಂದು ಅವರು ಕೋರಿದ್ದಾರೆ.