ಮಠಾಧೀಶರಿಗೆ ಹಾನಗಲ್ ಶ್ರೀ ಮಾದರಿ

ಬೀದರ್: ಸೆ.16:ಮಠಾಧೀಶರಿಗೆ ಹಾನಗಲ್ ಕುಮಾರ ಶಿವಯೋಗಿಗಳು ಮಾದರಿಯಾಗಿದ್ದರು ಎಂದು ಹಲಬರ್ಗಾ-ಶಿವಣಿ-ಹೈದರಾಬಾದ್ ಮಠದ ಹಾವಗಿಲಿಂಗೇಶ್ವರ ಶಿವಾಚಾರ್ಯ ಹೇಳಿದರು.

ಹೈದರಾಬಾದ್‍ನ ಜಿಯಾಗುಡಾದ ನಾಗಲಿಂಗೇಶ್ವರ ಸಂಸ್ಥಾನ ಮಠದಲ್ಲಿ ಆಯೋಜಿಸಿದ್ದ ಹಾನಗಲ್ ಕುಮಾರ ಶಿವಯೋಗಿಗಳ 155ನೇ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

ಆದರ್ಶ ಗುರುಗಳನ್ನು ತಯಾರು ಮಾಡಲು ಶಿವಯೋಗ ಮಂದಿರ ಸ್ಥಾಪಿಸಿದ್ದರು. ಇಂದು ಭಕ್ತರಿಗೆ ಒಳ್ಳೆಯ ಗುರುಗಳು ಸಿಗಲು ಅವರೇ ಕಾರಣಕರ್ತರು ಎಂದು ಬಣ್ಣಿಸಿದರು.

ವ್ಯಕ್ತಿಗಿಂತ ಸಮಾಜ ದೊಡ್ಡದು ಎಂದು ನಂಬಿದ್ದರು. ಸಮಾಜದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಸಮಾಜದಲ್ಲೇ ದೇವರನ್ನು ಕಂಡಿದ್ದರು. ಅಂತೆಯೇ ಸಮಾಜ ದೇವೋ ಭವ ಎಂದು ಸಾರಿದ್ದರು ಎಂದು ನುಡಿದರು.

ಅವರಿಗೆ ಯಾವುದೇ ಆಸೆ, ಆಕಾಂಕ್ಷೆಗಳು ಇರಲಿಲ್ಲ. ಮನುಕುಲದ ಉದ್ಧಾರವೇ ಅವರ ಧ್ಯೇಯವಾಗಿತ್ತು. ಸಮಾಜದಲ್ಲಿ ಆಧ್ಯಾತ್ಮಿಕ ಜಾಗೃತಿ ಮೂಡಿಸಿದ್ದರು. ಅಂಧ ಶ್ರದ್ಧೆ, ಕಂದಾಚಾರ, ಮೂಢ ನಂಬಿಕೆಗಳನ್ನು ಹೊಡೆದೊಡಿಸಲು ಅವಿರತ ಶ್ರಮಿಸಿದ್ದರು ಎಂದು ಹೇಳಿದರು.

ಆಧ್ಯಾತ್ಮಿಕ, ಸಾಮಾಜಿಕ, ಸಾಂಸ್ಕøತಿಕ ಸೇರಿದಂತೆ ಹಲವು ಕ್ಷೇತ್ರಗಳಿಗೆ ಅವರು ನೀಡಿದ ಕೊಡುಗೆ ಅಪಾರವಾಗಿದೆ. ಪಂಚಾಕ್ಷರ ಗವಾಯಿ, ಪುಟ್ಟರಾಜ ಕವಿ ಗವಾಯಿಗಳ ಸಂಗೀತ ಸಾಧನೆ ಹಿಂದೆಯೂ ಕುಮಾರ ಶಿವಯೋಗಿಗಳ ಪಾತ್ರ ಇದೆ. ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಹುಟ್ಟು ಹಾಕಿದ ಶ್ರೇಯವೂ ಅವರಿಗೆ ಇದೆ ಎಂದು ತಿಳಿಸಿದರು.

ಪ್ರಮುಖರಾದ ರಾಜಕುಮಾರ ಬಿರಾದಾರ, ಶ್ರೀಕಾಂತ ಕುಡತೆ, ಶಿವಾಜಿ ಬಿರಾದಾರ, ಸಂಜು ಪಾಟೀಲ, ಶರಣಯ್ಯ ಸ್ವಾಮಿ, ಬಾಬುರಾವ್ ನಾವದಗಿ, ಪ್ರಸಾದ ದಾಸೋಹಿ ಶಿವಕಾಂತ ಸ್ವಾಮಿ, ಇದ್ದರು.