ಮಠದ ಜಾಗೆಯಲ್ಲಿ ಕೆ.ಎಲ್.ಇ ಕಾಲೇಜು ನಿರ್ಮಾಣ ಬೇಡ: ದಿಂಗಾಲೇಶ್ವರ ಶ್ರೀ

ಹುಬ್ಬಳ್ಳಿ,ಡಿ 24: ಹುಬ್ಬಳ್ಳಿ ಮೂರುಸಾವಿರಮಠದ ಜಮೀನನ್ನು ಕೆ.ಎಲ್.ಇ ಮೆಡಿಕಲ್ ಕಾಲೇಜು ನಿರ್ಮಿಸಲು ದಾನ ಕೊಟ್ಟಿದ್ದು ಸರಿಯಲ್ಲ ಎಂದು ಬಾಲೆಹೊಸೂರಿನ ದಿಂಗಾಲೇಶ್ವರ ಶ್ರೀಗಳು ತಮ್ಮ ತೀವ್ರ ಅಸಮಾಧಾನ ಹೊರಹಾಕಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮೂರುಸಾವಿರ ಮಠದ 24.30 ಎಕರೆ ಜಮೀನನ್ನು ಮೆಡಿಕಲ್ ಕಾಲೇಜು ನಿರ್ಮಿಸಲು ಕೆ.ಎಲ್.ಇ ಸಂಸ್ಥೆಗೆ ದಾನವಾಗಿ ನೀಡಲಾಗಿದೆ. ಆದರೆ ಸುಪ್ರಿಂಕೋರ್ಟ್ ಮಠದ ಆಸ್ತಿಯನ್ನು ಪರಭಾರೆ ಮಾಡಕೂಡದು ಎಂದು ಕಲ್ಕತ್ತಾದಲ್ಲಿ ಕರಾರುಪತ್ರ ಮಾಡಿಸಿದೆ. ಕಾನೂನು ಉಲ್ಲಂಘಿಸಿ ಜಮೀನನ್ನು ದಾನವಾಗಿ ಕೊಟ್ಟಿದ್ದು ತಪ್ಪು ಎಂದರು.
ಕಾಲೇಜು ನಿರ್ಮಾಣಕ್ಕೆ ಭೂಮಿಪೂಜೆಗೆ ಮುಂದಾಗಿರುವ ಕೆ.ಎಲ್.ಇ ಸಂಸ್ಥೆ ಕಟ್ಟಡ ನಿರ್ಮಾಣಕ್ಕೆ ಮುಂದಾದರೆ ಕಾನೂನಾತ್ಮಕ ತೊಂದರೆ ಅನುಭವಿಸಬೇಕಾಗುತ್ತದೆ ಎಂದರು.
ಕೆ.ಎಲ್.ಇ ಸಂಸ್ಥೆಯವರು ಒಂದಲ್ಲ ಹತ್ತು ಮೆಡಿಕಲ್ ಕಾಲೇಜು ನಿರ್ಮಿಸಲಿ. ಅದಕ್ಕೆ ನನ್ನ ಅಭ್ಯಂತರವಿಲ್ಲ. ಆದರೆ ಬೇರೆ ಜಾಗದಲ್ಲಿ ನಿರ್ಮಿಸಲಿ ಎಂದು ನನ್ನ ವಿನಂತಿ ಎಂದರು. ಈ ಜಾಗದಲ್ಲಿ ಮೂರುಸಾವಿರಮಠದಿಂದಲೇ ಮೆಡಿಕಲ್ ಕಾಲೇಜು ನಿರ್ಮಿಸೋಣ. ಸಾವಿರಾರು ಮನೆಗಳಿಗೆ ಹೋಗಿ ನಾನೇ ಭಿಕ್ಷೆ ಪಡೆಯುತ್ತೇನೆ ಎಂದು ದಿಂಗಾಲೇಶ್ವರ ಶ್ರೀಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.